ಆ.31ರಿಂದ ಹಜ್ ಯಾತ್ರಿಕರ ಆಗಮನ
ಮಂಗಳೂರು,ಆ.28: ಕೇಂದ್ರ ಹಜ್ ಸಮಿತಿಯ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಜು.17,18,19ರಂದು ಮದೀನಾಕ್ಕೆ ಹೊರಟಿದ್ದ ಹಜ್ ಯಾತ್ರಿಕರು ಆ.31ರಿಂದ ಮಂಗಳೂರಿಗೆ ಆಗಮಿಸಲಿದ್ದಾರೆ.
ಆ.31ರಂದು ಬೆಳಗ್ಗೆ 8:40ಕ್ಕೆ ಜಿದ್ದಾದಿಂದ ಮರಳುವ ಪ್ರಥಮ ತಂಡವು ಸಂಜೆ 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ಅಂದು 5:40ಕ್ಕೆ ಹೊರಡುವ ಎರಡನೆ ತಂಡವು 1:30ಕ್ಕೆ ಮಂಗಳೂರು ತಲುಪಲಿದೆ. ಸೆಪ್ಟಂಬರ್ 1ರಂದು ಮುಂಜಾನೆ 4:40ಕ್ಕೆ ಹೊರಡುವ ಮೂರನೆ ತಂಡವು 12:30ಕ್ಕೆ ಮತ್ತು ಮುಂಜಾನೆ 5:40ಕ್ಕೆ ಹೊರಡುವ ನಾಲ್ಕನೆ ತಂಡವು 1:30ಕ್ಕೆ ಮಂಗಳೂರು ತಲುಪಲಿದೆ. ಸೆಪ್ಟಂಬರ್ 2ರಂದು 2:10ಕ್ಕೆ ಹೊರಡುವ ಐದನೆ ತಂಡವು 10 ಗಂಟೆಗೆ ಮಂಗಳೂರು ತಲುಪಲಿದೆ ಎಂದು ರಾಜ್ಯ ಹಜ್ ಕಮಿಟಿಯ ಪ್ರಕಟನೆ ತಿಳಿಸಿದೆ.
ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 747 ಹಜ್ ಯಾತ್ರಿಕರು ಮೂರು ದಿನಗಳ ಕಾಲ 5 ವಿಮಾನಗಳಲ್ಲಿ ನೇರ ಮದೀನಾಕ್ಕೆ ಯಾತ್ರೆ ಕೈಗೊಂಡಿದ್ದರು. ಆ ಪೈಕಿ ಬೈಕಂಪಾಡಿಯ ಮುಹಮ್ಮದ್ ಬಾವಾ ನಿಧನರಾಗಿದ್ದರು. ಉಳಿದಂತೆ ಸುಮಾರು 45 ದಿನಗಳ ಕಾಲ ಹಜ್ ಕರ್ಮ ನೆರವೇರಿಸಿದ ಇತರರು ತವರಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ.





