ರಫೆಲ್ ನಡಾಲ್, ಫ್ಯಾಬಿಯಾನೊ ಗೆಲುವಿನ ಆರಂಭ
ಅಮೆರಿಕನ್ ಓಪನ್

► ಸಿಟ್‌ಸಿಪಾಸ್, ಥೀಮ್‌ಗೆ ಮೊದಲ ಸುತ್ತಿನಲ್ಲೇ ಸೋಲು
ಹೊಸದಿಲ್ಲಿ, ಆ.28: ಜಾನ್ ಮಿಲ್ಮನ್‌ಗೆ ತಲೆ ಎತ್ತಲು ಅವಕಾಶ ನೀಡದ ಮೂರು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅಮೆರಿಕನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ನಡಾಲ್ ಅವರು ಮಿಲ್ಮನ್‌ರನ್ನು 6-3, 6-2, 6-2 ನೇರ ಸೆಟ್‌ಗಳಿಂದ ಮಣಿಸಿ ಮುಂದಿನ ಸುತ್ತಿಗೇರಿದರು.
ಮಿಲ್ಮನ್ ಕಳೆದ ವರ್ಷ ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್‌ರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ ಅಚ್ಚರಿ ಫಲಿತಾಂಶ ದಾಖಲಿಸಿದ್ದರು. ಆದರೆ, ಮಂಗಳವಾರ ನಡೆದ ಪಂದ್ಯದಲ್ಲಿ ಹಿಂದಿನ ಮ್ಯಾಜಿಕ್‌ನ್ನು ಪುನರಾವರ್ತಿಸಲು ವಿಫಲರಾಗಿ ಸ್ಪೇನ್‌ನ ಎರಡನೇ ಶ್ರೇಯಾಂಕದ ಆಟಗಾರನ ವಿರುದ್ಧ 3 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಮಂಡಿನೋವಿನಿಂದಾಗಿ ಸೆಮಿ ಫೈನಲ್ ಸುತ್ತಿನಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದ ನಡಾಲ್ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ನಡಾಲ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ವೈರ್ಲ್ಡ್‌ಕಾರ್ಡ್ ಆಟಗಾರ ಥನಸಿ ಕೊಕ್ಕಿನಕಿಸ್‌ರನ್ನು ಮುಖಾಮುಖಿಯಾಗಲಿದ್ದಾರೆ.
ಕೆನಡಾದ ವಾಸೆಕ್ ಪೊಸ್ಪಿಸಿಲ್ ರಶ್ಯದ 9ನೇ ಶ್ರೇಯಾಂಕದ ಕರೆನ್ ಖಚನೊವ್‌ರನ್ನು 4-6, 7-5, 7-5, 4-6, 6-3 ಸೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ.
ಜನವರಿಯಲ್ಲಿ ಬೆನ್ನುನೋವು ಕಾಣಿಸಿಕೊಂಡ ಬಳಿಕ ವಿಂಬಲ್ಡನ್ ಟೂರ್ನಿಯ ತನಕ ವಾಸೆಕ್ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದರು. ವಿಶ್ವ ರ್ಯಾಂಕಿಂಗ್‌ನಲ್ಲಿ 216ನೇ ಸ್ಥಾನಕ್ಕೆ ಕುಸಿದಿದ್ದರು.
ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರುಬ್ಲೆವ್ ಗ್ರೀಕ್ ಆಟಗಾರನನ್ನು 6-4, 6-7(5), 7-6(7), 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ಯುಎಸ್ ಓಪನ್‌ನಲ್ಲಿ ಎರಡನೇ ಸುತ್ತು ತಲುಪಿದರು.
ಎರಡು ವಾರಗಳ ಹಿಂದೆ ಸಿನ್ಸಿನಾಟಿ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್‌ರನ್ನು ಸೋಲಿಸಿ ವೃತ್ತಿಜೀವನದಲ್ಲಿ ಮಹತ್ವದ ಗೆಲುವು ದಾಖಲಿಸಿದ್ದ ವಿಶ್ವದ ನಂ.43ನೇ ಆಟಗಾರ ರುಬ್ಲೆವ್ ಎದುರಾಳಿ ಸಿಟ್‌ಸಿಪಾಸ್ ವಿರುದ್ಧ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು 6-3, 7-6(1),6-4 ಸೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿ ಎರಡನೇ ಸುತ್ತು ತಲುಪಿದರು.
ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಅಂಟೋನಿ ಹೊಯಾಂಗ್‌ರನ್ನು ಎದುರಿಸಲಿದ್ದಾರೆ.
► ಥೀಮ್‌ಗೆ ಆಘಾತ ನೀಡಿದ ಫ್ಯಾಬಿಯಾನೊ
ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಆಸ್ಟ್ರೀಯದ ಡೊಮಿನಿಕ್ ಥೀಮ್ ಕನಸು ಮಂಗಳವಾರ ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲೇ ಭಗ್ನವಾಗಿದೆ. ಥೀಮ್ ಶ್ರೇಯಾಂಕರಹಿತ ಥಾಮಸ್ ಫ್ಯಾಬಿಯಾನೊ ವಿರುದ್ಧ ಮೊದಲ ಸುತ್ತಿನಲ್ಲಿ 6-4, 3-6, 6-3, 6-2 ಅಂತರದಿಂದ ಆಘಾತಕಾರಿ ಸೋಲನುಭವಿಸಿದರು.
► ಸಿಟ್ ಸಿಪಾಸ್‌ಗೆ ಮನೆ ಹಾದಿ ತೋರಿಸಿದ ರುಬ್ಲೇವ್
ರಶ್ಯದ ಆ್ಯಂಡ್ರೂ ರುಬ್ಲೆವ್ ಗ್ರೀಕ್‌ನ ಎಂಟನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ಮಣಿಸಿ ಟೂರ್ನಿಯಿಂದ ಹೊರಹಾಕಿದರು.







