ಎಲ್‌ಒಸಿಗೆ ಭೇಟಿ: ಶಾಹಿದ್ ಅಫ್ರಿದಿ ಸರದಿ

ಹೊಸದಿಲ್ಲಿ, ಆ.28: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಗಡಿ ನಿಯಂತ್ರಣ ರೇಖೆಗೆೆ(ಎಲ್‌ಒಸಿ)ಭೇಟಿ ನೀಡಲು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ನಿರ್ಧರಿಸಿದ್ದಾರೆ. ಈ ವಿಚಾರವನ್ನು ಅವರು ಬುಧವಾರ ದೃಢಪಡಿಸಿದ್ದಾರೆ.
ಕಾಶ್ಮೀರ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪ್ರತಿವಾರ ತನ್ನ ದೇಶದಲ್ಲಿ 30 ನಿಮಿಷಗಳ ಕಾರ್ಯಕ್ರಮ ನಡೆಯಲಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈ ಹಿಂದೆ ಘೋಷಿಸಿದ್ದರು.
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿಯ ಕರೆಗೆ ಪ್ರತಿಕ್ರಿಯೆಯಾಗಿ ನಾನು ಶುಕ್ರವಾರ ಮಧ್ಯಾಹ್ನ ಕರಾಚಿಯಲ್ಲಿರುವ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಸಮಾಧಿ ಬಳಿ ತೆರಳುತ್ತೇನೆ. ನಮ್ಮ ಕಾಶ್ಮೀರ ಸಹೋದರರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಎಲ್ಲರೂ ನನ್ನೊಂದಿಗೆ ಕೈಜೋಡಿಸಿ. ನಾನು ಶೀಘ್ರವೇ ಎನ್‌ಒಸಿಗೆ ಭೇಟಿ ಕೊಡುತ್ತೇನೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ತನ್ನೊಂದಿಗೆ ಕೈಜೋಡಿಸಲು ಬಯಸುವ ಇತರ ಕ್ರೀಡಾಪಟುಗಳೊಂದಿಗೆ ಎಲ್‌ಒಸಿಗೆ ಭೇಟಿ ನೀಡುವೆ. ಅಲ್ಲಿ ಶಾಂತಿಯ ಧ್ವಜ ಹಾರಿಸುವೆ ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಮಂಗಳವಾರ ಟ್ವೀಟರ್ ವೀಡಿಯೊದಲ್ಲಿ ಹೇಳಿದ್ದರು.
ಮಂಗಳವಾರ ಎಲ್‌ಒಸಿಗೆ ಭೇಟಿ ನೀಡಿದ್ದ ಪಾಕಿಸ್ತಾನ ಮೂಲದ ಬ್ರಿಟಿಷ್ ಬಾಕ್ಸರ್ ಆಮಿರ್ ಖಾನ್ ಅಲ್ಲಿನ ಕುಟುಂಬದವರನ್ನು ಭೇಟಿಯಾಗಿದ್ದರು. ಪಾಕಿಸ್ತಾನದ ಸೇನೆಯು ಬಾಕ್ಸರ್ ಆಮಿರ್ ಭೇಟಿಯ ಕಾರ್ಯಕ್ರಮವನ್ನು ಆಯೋಜಿಸಿತ್ತು.







