ಉಪ್ಪಿನಂಗಡಿ: ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ

ಉಪ್ಪಿನಂಗಡಿ: ಸೂಕ್ತ ಅವಕಾಶ ಸಿಕ್ಕಾಗ ಮಾತ್ರ ಪ್ರತಿಭೆ ಅರಳಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಕ್ರೀಡಾ ಪ್ರತಿಭೆಗಳಿದ್ದು, ಅದನ್ನು ಅನಾವರಣಗೊಳಿಸಲು ಇಂತಹ ಕ್ರೀಡಾಕೂಟ ಸೂಕ್ತ ವೇದಿಕೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವುಗಳ ಸಹಯೋಗದೊಂದಿಗೆ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಆ.28ರಂದು ನಡೆದ 14ರ ವಯೋಮಾನದ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಹೆಮ್ಮೆಯ ವೇಗದ ಓಟಗಾರ್ತಿ ಪಿ.ಟಿ. ಉಷಾ, ರಾಜ್ಯದಲ್ಲಿ ಕಬಡ್ಡಿ ಪಟುವಾಗಿ ಮಿಂಚುತ್ತಿರುವ ಸಂತೋಷ್ ರೈ ತೀರಾ ಗ್ರಾಮೀಣ ಪ್ರದೇಶದ ಪ್ರತಿಭೆಗಳಾಗಿದ್ದು, ಇಂತಹ ಬಹಳಷ್ಟು ಅದ್ಭುತ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಇವೆ. ಅವರುಗಳನ್ನು ಹೊರ ತರುವ ಕೆಲಸಗಳನ್ನು ದೈಹಿಕ ಶಿಕ್ಷಕರು ಮಾಡಬೇಕು ಎಂದ ಅವರು, ವಿದ್ಯಾರ್ಥಿ ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸುವ ಗುರಿ ಹೊಂದಿರಬೇಕು ಎಂದರು.
ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಅನುಭವ ಪಡೆಯುವ ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಇಚ್ಛಾಶಕ್ತಿ, ಗುರಿ ಇರಬೇಕು ಆಗ ಮಾತ್ರ ಯಶಸ್ಸು ಸಾಧ್ಯ ಎಂದರಲ್ಲದೆ, ಕ್ರೀಡಾಕೂಟದ ತೀರ್ಪುಗಾರರು ಯಾವುದೇ ತಾರತಮ್ಯ ತೋರದೆ ನಿಜವಾದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಅವರು ತಾನು ಕಲಿತ ಉಪ್ಪಿನಂಗಡಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿರುವುದರಿಂದ ಇಬ್ಬರು ಶಿಕ್ಷಕರನ್ನು ಅಲ್ಲಿಗೆ ಹಾಗೂ ನೆಕ್ಕಿಲಾಡಿ ಶಾಲೆಗೆ ಓರ್ವ ಶಿಕ್ಷಕರು ಸೇರಿದಂತೆ ಒಟ್ಟು 3 ಶಿಕ್ಷಕರಿಗೆ ವೇತನವನ್ನು ನೀಡುತ್ತಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಯನಾ ಜಯಾನಂದ ಮಾತನಾಡಿ, ಕಲಿಕೆ, ಅಂಕ ಪಡೆಯುವುದಕ್ಕೆ ಕೊಡುವ ಮಹತ್ವವನ್ನು ಕ್ರೀಡೆಗಳಿಗೂ ಕೊಡಬೇಕಾಗಿದ್ದು, ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ ಆಗಲಿದೆ. ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪುವ ಬಗ್ಗೆ ಆಸಕ್ತಿ ಹೊಂದಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಸಂಚಾಲಕ ಯು.ಎಸ್.ಎ. ನಾಯಕ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶೃದ್ಧೆ ಮುಖ್ಯ, ಜೊತೆಗೆ ತಾನು ತಾಲೂಕು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುತ್ತೇನೆ ಎಂಬ ದೃಢತೆ ಹೊಂದಿರಬೇಕು, ಆಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.
ತಾ.ಪಂ. ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ, ಇಂದ್ರಪ್ರಸ್ಥ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಶ್ರೀಮತಿ ವಸಂತಿ ನಾಯಕ್ ಉಪಸ್ಥಿತರಿದ್ದರು.
ಸನ್ಮಾನ: ಸಮಾರಂಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ದೈಹಿಕ ಶಿಕ್ಷಕ ಮೋನಪ್ಪ ಪಟ್ಟೆಯವರನ್ನು ಸನ್ಮಾನಿಸಲಾಯಿತು. ವಿದ್ಯಾಲಯದ ಪ್ರಾಚಾರ್ಯ ಜೋಸ್ ಎಂ.ಜೆ. ಸ್ವಾಗತಿಸಿದರು. ಶಿಕ್ಷಕಿ ವೀಣಾ ವಂದಿಸಿದರು. ಸುಪ್ರೀಯ, ನೇಹ ಕಾರ್ಯಕ್ರಮ ನಿರೂಪಿಸಿದರು.
ನೆರೆ ಪರಿಹಾರ ನಿಧಿಗೆ ಒಂದೂವರೆ ಲಕ್ಷ ರೂಪಾಯಿ
ಸಮಾರಂಭದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚೆಕ್ ಶಾಸಕ ಸಂಜೀವ ಮಠಂದೂರು ಅವರಿಗೆ ಹಸ್ತಾಂತರಿಸಿದರು.
.jpg)







