ಇಸ್ರೇಲ್ ದಾಳಿ: ಇರಾಕ್ ಸರಕಾರಕ್ಕೆ ಉರುಳುವ ಭೀತಿ

ಬಗ್ದಾದ್, ಆ. 28: ಇರಾನ್ ಜೊತೆ ನಂಟು ಹೊಂದಿರುವ ಅರೆ ಸೇನಾಪಡೆಗಳ ಇರಾಕ್‌ನಲ್ಲಿರುವ ನೆಲೆಗಳ ಮೇಲೆ ಸರಣಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇರಾಕ್‌ನ ಪ್ರಧಾನಿ ಆದಿಲ್ ಅಬ್ದುಲ್-ಮಹ್ದಿ ನೇತೃತ್ವದ ಸರಕಾರ ಕೆಲವೇ ವಾರಗಳಲ್ಲಿ ಪತನಗೊಳ್ಳಬಹುದಾಗಿದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ಬಾಂಬ್ ದಾಳಿಗಳಿಂದ ಪ್ರಧಾನಿ ಮುಜುಗರಕ್ಕೊಳಗಾಗಿದ್ದಾರೆ ಹಾಗೂ ಅವರು ದೇಶಿ ಮತ್ತು ಅಂತರ್‌ರಾಷ್ಟ್ರೀಯ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ಸರಕಾರಿ ಅಧಿಕಾರಿಗಳು, ಸಶಸ್ತ್ರ ಗುಂಪುಗಳ ಕಮಾಂಡರ್‌ಗಳು ಮತ್ತು ವೀಕ್ಷಕರು ಮಂಗಳವಾರ ‘ಅರಬ್ ನ್ಯೂಸ್’ಗೆ ಹೇಳಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇರಾಕ್‌ನಲ್ಲಿ 18 ಬಾಂಬ್ ದಾಳಿಗಳು ಮತ್ತು ಎರಡು ವಾಯು ದಾಳಿಗಳು ಸಂಭವಿಸಿವೆ. ಹೆಚ್ಚಿನ ದಾಳಿಗಳನ್ನು ಇರಾಕ್ ಸರಕಾರದ ಜೊತೆಗೂಡಿ ಐಸಿಸ್ ವಿರುದ್ಧ ಹೋರಾಡಿದ ಸಶಸ್ತ್ರ ಗುಂಪುಗಳ ಉಗ್ರಾಣಗಳು ಮತ್ತು ಪ್ರಧಾನಕಚೇರಿಗಳನ್ನು ಗುರಿಯಾಗಿಸಿ ನಡೆಸಲಾಗಿದೆ.
ಈ ದಾಳಿಗಳನ್ನು ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಡೆಸುತ್ತಿದೆ ಎಂದು ಈ ಗುಂಪುಗಳು ಆರೋಪಿಸಿವೆ.





