75 ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ

ಹೊಸದಿಲ್ಲಿ: ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪನ್ಮೂಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. 2021-22ರ ಒಳಗಾಗಿ ಇವು ಕಾರ್ಯಾರಂಭ ಮಾಡಲಿದ್ದು, ಹಾಲಿ ಇರುವ ಜಿಲ್ಲಾ ಆಸ್ಪತ್ರೆಗಳನ್ನೇ ಇವುಗಳಿಗೆ ರೆಫರಲ್ ಆಸ್ಪತ್ರೆಗಳಾಗಿ ಬಳಸಿಕೊಳ್ಳಲಾಗುತ್ತದೆ.
ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೂರನೇ ಹಂತವಾಗಿ ಈ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ 15700 ಹೆಚ್ಚುವರಿ ಎಂಬಿಬಿಎಸ್ ಸೀಟುಗಳು ದೇಶದಲ್ಲಿ ಸೃಷ್ಟಿಯಾಗಲಿವೆ. ಇದು ವೈದ್ಯರ ಲಭ್ಯತೆ ಹೆಚ್ಚಳಕ್ಕೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮುರನೇ ಹಂತದ ಚಿಕಿತ್ಸಾ ಸೌಲಭ್ಯ ವೃದ್ಧಿಗೆ, ಹಾಲಿ ಜಿಲ್ಲಾಸ್ಪತ್ರೆಗಳಲ್ಲಿ ಇರುವ ಆರೋಗ್ಯ ಮೂಲಸೌಕರ್ಯಗಳ ಉತ್ತಮ ಬಳಕೆಗೆ ನೆರವಾಗಲಿದೆ.
ಕನಿಷ್ಠ 200 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಗಳಿರುವ ಸೌಲಭ್ಯವಂಚಿತ ಪ್ರದೇಶಗಳಲ್ಲಿ ಈ ಹೊಸ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
"ಸಚಿವ ಸಂಪುಟ ಇದಕ್ಕಾಗಿ 2021-22ನೇ ಹಣಕಾಸು ವರ್ಷದಲ್ಲಿ ಅಂದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ 24,375 ಕೋಟಿ ರೂಪಾಯಿ ವೆಚ್ಚವನ್ನು ಅನುಮೋದಿಸಲಿದೆ" ಎಂದು ಪ್ರಕಟನೆ ತಿಳಿಸಿದೆ. ಇದಕ್ಕೂ ಮುನ್ನ ಸರ್ಕಾರ ಒಂದನೇ ಹಂತದಲ್ಲಿ 58, ಎರಡನೇ ಹಂತದಲ್ಲಿ 24 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿತ್ತು. ಈ ಪೈಕಿ ಒಂದನೇ ಹಂತದ 39 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಉಳಿದ 19 ಕಾಲೇಜುಗಳು 2020-21ರಿಂದ ಆರಂಭವಾಗಲಿವೆ. 18 ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ.







