‘ಬ್ರೆಕ್ಸಿಟ್’ಗಾಗಿ ಬ್ರಿಟಿಶ್ ಸಂಸತ್ತನ್ನು ಅಮಾನತಿನಲ್ಲಿಟ್ಟ ಬೊರಿಸ್ ಜಾನ್ಸನ್

ಲಂಡನ್, ಆ. 29: ಮುಂಬರುವ ಸಂಸತ್ ಅಧಿವೇಶನದ ಅವಧಿಯನ್ನು ಕಡಿತಗೊಳಿಸಲು ರಾಣಿ ಎಲಿಝಬೆತ್ರ ಒಪ್ಪಿಗೆಯನ್ನು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಪಡೆದುಕೊಳ್ಳುವ ಮೂಲಕ ಬ್ರೆಕ್ಸಿಟ್ ವಿರೋಧಿಗಳ ಎಣಿಕೆಗಳನ್ನು ಬುಡಮೇಲುಗೊಳಿಸಿದ್ದಾರೆ. ಈ ಮೂಲಕ, ಜಾನ್ಸನ್ರ ಬ್ರೆಕ್ಸಿಟ್ ಯೋಜನೆಗಳಿಗೆ ತಡೆ ಹೇರಲು ವಿರೋಧಿಗಳಿಗೆ ಸಾಧ್ಯವಾಗುವುದಿಲ್ಲ.
ವಿರಾಮದ ಬಳಿಕ ಬ್ರಿಟಿಶ್ ಸಂಸತ್ತು ಸೆಪ್ಟಂಬರ್ 3ರಂದು ಪುನರಾರಂಭಗೊಳ್ಳಲಿದೆ. ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಅಕ್ಟೋಬರ್ 31ರಂದು ಹೊರಬರಲು (ಬ್ರೆಕ್ಸಿಟ್) ನಿಗದಿಯಾಗಿದೆ. ಸಂಸತ್ ಅಧಿವೇಶನದ ಅವಧಿಯನ್ನು ಕಡಿತಗೊಳಿಸುವ ಕ್ರಮದ ವಿರುದ್ಧ ವಿರೋಧ ಹೆಚ್ಚುತ್ತಿರುವಂತೆಯೇ, ಈ ಕ್ರಮಕ್ಕೆ ರಾಣಿಯ ಅನುಮತಿ ಪಡೆದುಕೊಳ್ಳುವಲ್ಲಿ ಜಾನ್ಸನ್ ಸರಕಾರ ಯಶಸ್ವಿಯಾಗಿದೆ.
ಅಗತ್ಯ ಬಿದ್ದರೆ ಒಪ್ಪಂದರಹಿತವಾಗಿ ಐರೋಪ್ಯ ಒಕ್ಕೂಟದಿಂದ ಹೊರಬೀಳುವ ಜಾನ್ಸನ್ ಯೋಜನೆಗೆ ಆಡಳಿತಾರೂಢ ಕನ್ಸರ್ವೇಟಿವ್ ಸಂಸದರು ಸೇರಿದಂತೆ ಹಲವು ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಯೋಜನೆಯನ್ನು ನಿಲ್ಲಿಸಲು ಸಂಸತ್ತನ್ನು ಬಳಸುವ ಉದ್ದೇಶವನ್ನು ಅವರು ಹೊಂದಿದ್ದರು. ಆದರೆ, ಸಂಸತ್ನ ಅಧಿವೇಶನದ ಅವಧಿ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಅವರ ಯೋಜನೆಗಳು ಫಲಿಸದಿರುವ ಸಾಧ್ಯತೆಗಳಿವೆ.
ಸಂಸತ್ತನ್ನು ಅಮಾನತಿನಲ್ಲಿಡುವ ಜಾನ್ಸನ್ ನಿರ್ಧಾರವು ‘ಸಂವಿಧಾನದ ನಿಂದನೆಯಾಗಿದೆ’ ಎಂದು ಹೌಸ್ ಆಫ್ ಕಾಮನ್ಸ್ನ ಸ್ಪೀಕರ್ ಜಾನ್ ಬರ್ಕೋ ಬಣ್ಣಿಸಿದ್ದಾರೆ.