ಬಿಬಿಎಂಪಿ ಬಜೆಟ್: 1,308.89 ಕೋಟಿ ರೂ. ಕಡಿತ- ರಾಜ್ಯ ಸರಕಾರ ಅನುಮೋದನೆ

ಬೆಂಗಳೂರು, ಆ.29: ಬಿಬಿಎಂಪಿಯು 2019-20ನೇ ಸಾಲಿನಲ್ಲಿ ಮಂಡಿಸಿದ್ದ ಬಜೆಟ್ನ್ನು ನಗರಾಭಿವೃದ್ಧಿ ಇಲಾಖೆ 1,308.89 ಕೋಟಿ ರೂ. ಕಡಿತಗೊಳಿಸಿ, 11,648.90 ಕೋಟಿ ರೂ.ಗೆ ಅನುಮೋದಿಸಿತ್ತು. ಇದಕ್ಕೆ ರಾಜ್ಯ ಸರಕಾರ ಈಗ ಅನುಮೋದನೆ ನೀಡಿದೆ.
ಪಾಲಿಕೆಯ ಮೈತ್ರಿ ಆಡಳಿತ 2019-20ನೇ ಸಾಲಿನಲ್ಲಿ 12,958 ಕೋಟಿ ರೂ. ಮೊತ್ತದ ಭಾರೀ ಗಾತ್ರದ ಬಜೆಟ್ ಮಂಡಿಸಿತ್ತು. ಈಗ 11,648.90 ಕೋಟಿ ರೂ. ಬಜೆಟ್ಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಉಳಿದ 1,309 ಕೋಟಿ ರೂ.ಗೆ ತನ್ನ ಆದಾಯ ನೋಡಿಕೊಂಡು ಪೂರಕ ಬಜೆಟ್ ಸಿದ್ಧಪಡಿಸುವಂತೆ ಪಾಲಿಕೆಗೆ ಸೂಚಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಪೂರ್ಣಗೊಂಡು ಬಾಕಿಯಿರುವ ಬಿಲ್ಲುಗಳ ಮೊತ್ತ 2,954.83 ಕೋಟಿ ರೂ.ಗಳಷ್ಟಿದೆ. ಜತೆಗೆ 4,167 ಕೋಟಿ ರೂ.ಗಳ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಯಾದೇಶ ಪಡೆದು ಪ್ರಾರಂಭ ಆಗಬೇಕಿರುವ ಕಾಮಗಾರಿಗಳ ಮೊತ್ತ 728.10 ಕೋಟಿ ರೂ.ಗಳಾಗಿದ್ದು, ಕಾಮಗಾರಿ ಸಂಖ್ಯೆ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಮೊತ್ತವು 1,996 ರೂ.ಗಳಷ್ಟಿದೆ.
ಕಾಮಗಾರಿ ಸಂಖ್ಯೆ ನೀಡಲಾಗಿರುವ ಟೆಂಡರ್ ಕರೆಯಬೇಕಾಗಿರುವ ಕಾಮಗಾರಿಗಳ ಮೊತ್ತ 1,801.28 ಕೋಟಿ ರೂ. ಹಾಗೂ ಆಡಳಿತಾತ್ಮಕ ಅನುಮೋದನೆಗೊಂಡು ಕಾಮಗಾರಿ ಸಂಖ್ಯೆ ನೀಡಬೇಕಾಗಿರುವ ಮೊತ್ತ 1193.66 ಕೋಟಿ ರೂ. ಸೇರಿ ಒಟ್ಟು 12,841 ಕೋಟಿ ರೂ.ಗಳ ಕಾಮಗಾರಿ ಮೊತ್ತವನ್ನು ಪಾವತಿಸಬೇಕಾಗಿದೆ. ಇದೆಲ್ಲವೂ ಹಿಂದಿನ ಬಜೆಟ್ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಬಾಬ್ತು. ಇಷ್ಟೆಲ್ಲ ಆರ್ಥಿಕ ಹೊರೆಯಿದ್ದರೂ, 13 ಸಾವಿರ ಕೋಟಿ ರೂ. ಮೊತ್ತದ ಬಜೆಟ್ಗೆ ಅನುಮೋದನೆ ನೀಡಿರುವುದು ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು, 2018-19ನೇ ಸಾಲಿನಲ್ಲಿ ಬಿಬಿಎಂಪಿಯು ವಿವಿಧ ಮೂಲಗಳಿಂದ 3,766.64 ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ, ಸಂಗ್ರಹವಾಗಿದ್ದು 2,419 ಕೋಟಿ ರೂ. ಮಾತ್ರ. 2019-20ನೇ ಸಾಲಿನಲ್ಲಿ 9,351.68 ಕೋಟಿ ರೂ.ಗಳ ಆದಾಯ ಬರಲಿದೆ ಎಂದು ಉಲ್ಲೇಖೀಸಲಾಗಿದ್ದು, ಈ ಮೊತ್ತ ಸಂಗ್ರಹಕ್ಕೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿಲ್ಲ. ಜತೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ 3,606 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.
ಬಿಜೆಪಿ ಸದಸ್ಯರಿಗೆ ಅನುದಾನ: ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅತಿ ಹೆಚ್ಚು ಅನುದಾನ ನೀಡಲಾಗಿದ್ದು, ಯಲಹಂಕ ಕ್ಷೇತ್ರಕ್ಕೆ 33 ಕೋಟಿ ರೂ. ಹಾಗೂ ಬೊಮ್ಮನಹಳ್ಳಿಗೆ 30 ಕೋಟಿ ರೂ. ನೀಡಲಾಗಿದೆ. ಮಹದೇವಪುರ, ಬೆಂಗಳೂರು ದಕ್ಷಿಣಕ್ಕೆ ತಲಾ 20 ಕೋಟಿ ರೂ., ಸಿ.ವಿ.ರಾಮನ್ನಗರ, ಪದ್ಮನಾಭನಗರ, ಯಲಹಂಕ, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ. ನಿಗದಿಪಡಿಸಲಾಗಿದೆ.
ಮೇಯರ್ ಅನುದಾನ ಕಡಿತ: ಮೇಯರ್ ಮತ್ತು ಉಪಮೇಯರ್ ಪ್ರತಿನಿದಿಸುವ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿಗದಿ ಮಾಡಲಾಗಿದ್ದ ಅನುದಾನದಲ್ಲೂ ಕಡಿತ ಮಾಡಲಾಗಿದ್ದು, ಮೇಯರ್ ಗಂಗಾಂಬಿಕೆ ಪ್ರತಿನಿಧಿಸುವ ವಾರ್ಡ್ಗೆ ನೀಡಿದ್ದ 15 ಕೋಟಿ ರೂ. ಅನುದಾನವನ್ನು 5 ಕೋಟಿ ರೂ.ಗೆ ಮತ್ತು ಉಪಮೇಯರ್ ಭದ್ರೇಗೌಡ ವಾರ್ಡ್ಗೆ ನೀಡಿದ್ದ 10 ಕೋಟಿ ರೂ.ಗಳನ್ನು 5 ಕೋಟಿ ರೂ.ಗೆ ಇಳಿಸಲಾಗಿದೆ. ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ವಾರ್ಡ್ ಅನುದಾನ 7 ಕೋಟಿಯಿಂದ 3 ಕೋಟಿ ರೂ.ಗೆ ಇಳಿದಿದೆ.