ಮೇಯರ್ ಚುನಾವಣೆಯ ಮತದಾರರ ಪಟ್ಟಿ: ಅನರ್ಹ ಶಾಸಕರ ಹೆಸರಿಲ್ಲ !
ಬೆಂಗಳೂರು, ಆ.29: ರಾಜಧಾನಿಯ ಅನರ್ಹ ಶಾಸಕರ ಹೆಸರನ್ನು ಬಿಬಿಎಂಪಿ ಮೇಯರ್ ಚುನಾವಣೆಯ ಪರಿಷ್ಕೃತರ ಮತದಾರರ ಪಟ್ಟಿಯಿಂದ ಪ್ರಾದೇಶಿಕ ಚುನಾವಣಾ ಆಯುಕ್ತರು ಕೈಬಿಟ್ಟಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಸಮರ ನಡೆಸುತ್ತಿರುವ ಐವರು ಅನರ್ಹ ಶಾಸಕರನ್ನು ಮೇಯರ್ ಚುನಾವಣಾ ಪಟ್ಟಿಯಿಂದ ತೆಗೆದು ಹಾಕಿರುವುದರಿಂದ ಮುಂದಿನ ಮೇಯರ್ ಹುದ್ದೆ ಬಿಜೆಪಿ ಪಾಲಾಗುವುದು ನಿಶ್ಚಿತವಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಿಂದ ಅನರ್ಹ ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಮತ್ತು ರೋಷನ್ ಬೇಗ್ ಅವರ ಹೆಸರನ್ನು ಮೇಯರ್ ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಪರಿಷ್ಕೃತರ ಮತದಾರರ ಪಟ್ಟಿಯಿಂದ ಪ್ರಾದೇಶಿಕ ಚುನಾವಣಾ ಆಯುಕ್ತರು ಕೈಬಿಟ್ಟಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಮೇಯರ್ ಚುನಾವಣೆ ನಡೆಯಲಿದ್ದು, ಒಂದು ವಾರದ ಮುಂಚೆ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆಯನ್ನು ಹೊರಡಿಸುತ್ತಾರೆ. ಆ ವೇಳೆಗೆ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಏನಾದರು ಅವರ ಪರವಾಗಿ ತೀರ್ಪು ಬಿದ್ದರೆ ಅವರು ಮತದಾನದಲ್ಲಿ ಭಾಗವಹಿಸುತ್ತಾರೆ. ಇಲ್ಲದಿದ್ದಲ್ಲಿ ಅವರು ಮತದಾನದಿಂದ ಹೊರಗೆ ಉಳಿಯಬೇಕಾಗುತ್ತದೆ. ಹಾಗಾಗಿ, ಬಿಜೆಪಿ ಮುಂದಿನ ಬಿಬಿಎಂಪಿ ಗದ್ದುಗೆ ಹಿಡಿಯುವುದು ಖಚಿತವಾಗಲಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸತ್ಗೆ ಆಯ್ಕೆಯಾದ ನೂತನ ಸಂಸದರ ಹೆಸರನ್ನೂ ಕೂಡ ಸೇರ್ಪಡೆಗೊಳಿಸಲಾಗಿದ್ದು, ಇದನ್ನೂ ಕೂಡ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಕಳುಹಿಸಲಾಗಿದೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಬಿಎಂಪಿ ಸದಸ್ಯರು ಬೆಂಗಳೂರು ನಗರದಿಂದ ಆಯ್ಕೆಯಾದ ವಿಧಾನಸಭಾ ಸದಸ್ಯರು ಹಾಗೂ ಸಂಸದರು ಭಾಗವಹಿಸುತ್ತಾರೆ.