75 ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ: ಜಾವಡೇಕರ್

ಹೊಸದಿಲ್ಲಿ, ಆ.29: ದೇಶದಲ್ಲಿ ಮುಂದಿನ 3 ವರ್ಷದೊಳಗೆ 75 ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 24,375 ಕೋಟಿ ರೂ. ನಿಗದಿಗೊಳಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮೆಡಿಕಲ್ ಕಾಲೇಜುಗಳಿಲ್ಲದ ಪ್ರದೇಶಗಳಲ್ಲಿ ಕನಿಷ್ಟ 200 ಹಾಸಿಗೆಗಳ ಸೌಲಭ್ಯವುಳ್ಳ ಆಸ್ಪತ್ರೆ ಸಹಿತ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲಾಗುವುದು. ಪ್ರಥಮ ಹಂತದಲ್ಲಿ 58 ಹೊಸ ವೈದ್ಯಕೀಯ ಕಾಲೇಜುಗಳನ್ನು ಈಗ ಇರುವ ಜಿಲ್ಲಾಸ್ಪತ್ರೆಗೆ ಸೇರಿಕೊಂಡು ಸ್ಥಾಪಿಸುವ ಯೋಜನೆಯಿದೆ. ಇದರಲ್ಲಿ 39 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿದೆ. 2020-21ರೊಳಗೆ ಉಳಿದ 19 ಕೂಡಾ ಕಾರ್ಯಾಚರಿಸಲಿವೆ. ಎರಡನೇ ಹಂತದಲ್ಲಿ 18 ಹೊಸ ಮೆಡಿಕಲ್ ಕಾಲೇಜು ಆರಂಭವಾಗಲಿದೆ.
ಹೊಸ 75 ಮೆಡಿಕಲ್ ಕಾಲೇಜು ಆರಂಭದಿಂದ ದೇಶದಲ್ಲಿ ಕನಿಷ್ಟ 15,700 ಎಂಬಿಬಿಎಸ್ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಕಳೆದ 5 ವರ್ಷದಲ್ಲಿ 82 ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಮೂಲಕ ಹೆಚ್ಚುವರಿ 45000 ಮೆಡಿಕಲ್ ಸೀಟುಗಳು ಲಭ್ಯವಾಗಿವೆ ಎಂದು ಸಚಿವರು ಹೇಳಿದ್ದಾರೆ.





