ಬಾಬರ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿರಲಿಲ್ಲ: ರಾಮ ಜ್ನಮಭೂಮಿ ಸಮಿತಿ

ಹೊಸದಿಲ್ಲಿ,ಆ.29: 1528ರಲ್ಲಿ ಮುಘಲ್ ದೊರೆ ಬಾಬರ್ ಅಯೋಧ್ಯೆಗೆ ಭೇಟಿ ನೀಡಿರಲೂ ಇಲ್ಲ ಮತ್ತು ಮಂದಿರವನ್ನು ಧ್ವಂಸಗೊಳಿಸಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ಇರುವ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಆದೇಶವನ್ನೂ ನೀಡಿರಲಿಲ್ಲ ಎಂದು ಅಖಿಲ ಭಾರತೀಯ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಮುಸ್ಲಿಂ ಸಂಘಟನೆ ದಾಖಲಿಸಿರುವ ಅರ್ಜಿಯ ಪ್ರತಿವಾದಿಯಾಗಿರುವ ಹಿಂದು ಸಂಘಟನೆ, ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಮುಂದೆ ತನ್ನ ಹೇಳಿಕೆಗೆ ಪೂರಕವಾಗಿ ತುಝುಕಿ ಬಾಬರಿ ಅಥವಾ ಬಾಬರ್‌ನಾಮ, ಹುಮಾಯುನ್ನಾಮ, ಅಕ್ಬರ್‌ನಾಮ ಮತ್ತು ತುಝುಕಿ ಜಹಂಗೀರ್ ಮುಂತಾದ ಐತಿಹಾಸಿಕ ಪುಸ್ತಕಗಳನ್ನು ಉಲ್ಲೇಖಿಸಿತ್ತು. ದಶಕಗಳಷ್ಟು ಹಳೆಯ ಪ್ರಕರಣದ 14ನೇ ದಿನದ ವಿಚಾರಣೆಯಲ್ಲಿ ಸಮಿತಿಯ ಪರ ವಾದಿಸಿದ ಪಿ.ಎನ್ ಮಿಶ್ರಾ, ಈ ಯಾವ ಪುಸ್ತಕದಲ್ಲೂ ಅದರಲ್ಲೂ ಮುಖ್ಯವಾಗಿ ಬಾಬರ್‌ನಾಮದಲ್ಲಿ ಅಯೋಧ್ಯೆಯಲ್ಲಿ ಪ್ರಥಮ ಮುಘಲ್ ಚಕ್ರವರ್ತಿಯ ಸೇನಾಧಿಪತಿ ಮಿರ್ ಬಕಿ ಮಂದಿರ ಧ್ವಂಸಗೊಳಿಸಿದ ಅಥವಾ ಬಾಬರಿ ಮಸೀದಿ ನಿರ್ಮಿಸಿದ ಬಗ್ಗೆ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ.
ಬಾಬರ್ ಅಯೋಧ್ಯೆಗೆ ಭೇಟಿ ನೀಡಿರಲಿಲ್ಲ. ಹಾಗಾಗಿ 1528ರಲ್ಲಿ ಆತ ಅಲ್ಲಿ ಮಂದಿರವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲು ಆದೇಶ ನೀಡಲು ಸಾಧ್ಯವಿಲ್ಲ. ಅದಕ್ಕೂ ಮಿಗಿಲಾಗಿ, ಮಿರ್ ಬಕಿ ಹೆಸರಿನ ಯಾವ ವ್ಯಕ್ತಿಯೂ ಬಾಬರ್ ಸೇನಾಧಿಪತಿಯಾಗಿರಲಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.
ಈ ಎಲ್ಲ ಪುಸ್ತಕಗಳನ್ನು ಉಲ್ಲೇಖಿಸಿ ಏನನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಮುಸ್ಲಿಮರಿಗೆ ಸಂಬಂಧಿಸಿದಂತೆ ಬಾಬರ್‌ನಾಮ ಮೊದಲ ಐತಿಹಾಸಿಕ ಪುಸ್ತಕವಾಗಿದೆ. ನಾನು ಪ್ರತಿವಾದಿಗಳ ಪರ ವಕೀಲನಾಗಿರುವುದರಿಂದ ಮನವಿದಾರರ ವಾದವನ್ನು ಸುಳ್ಳೆಂದು ಸಾಬೀತುಪಡಿಸಲು ಬಯಸುತ್ತೇನೆ. ಅವರು ನಮ್ಮ ಮಂದಿರವನ್ನು ಮಸೀದಿ ಎಂದು ಘೋಷಿಸಬೇಕೆಂದು ಹೇಳುತ್ತಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.







