ಆ.30 ರಿಂದ ಹೃದಯ ಶಸ್ತ್ರ ಚಿಕಿತ್ಸೆಯ ಜಾಗತಿಕ ಸಮಾವೇಶ
![ಆ.30 ರಿಂದ ಹೃದಯ ಶಸ್ತ್ರ ಚಿಕಿತ್ಸೆಯ ಜಾಗತಿಕ ಸಮಾವೇಶ ಆ.30 ರಿಂದ ಹೃದಯ ಶಸ್ತ್ರ ಚಿಕಿತ್ಸೆಯ ಜಾಗತಿಕ ಸಮಾವೇಶ](/images/placeholder.jpg)
ಬೆಂಗಳೂರು, ಆ.29: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹೃದಯ ಶಸ್ತ್ರ ಚಿಕಿತ್ಸೆಯ ಜಾಗತಿಕ ಸಮಾವೇಶವನ್ನು ಆ.30ರಿಂದ 31ರವರೆಗೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಜಯಪ್ರಕಾಶ್ ಶೆಂತರ್, ದಕ್ಷಿಣ ಏಪ್ಯಾದಲ್ಲೇ ಮೊದಲ ಬಾರಿಗೆ ‘ಎಲೆಕ್ಟ್ರೋಫಿಸಿಯಾಲಜಿ’ ಅತ್ಯಾಧುನಿಕ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿ, ಜಾಗತಿಕ ಗಮನ ಸೆಳೆಯಲಾಗುತ್ತಿದೆ. ಎರಡು ದಿನಗಳವರೆಗೆ ಜಯದೇವ ಹೃದ್ರೋಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲ್ಲಿರುವ ಶಸ್ತ್ರ ಚಿಕಿತ್ಸೆಯನ್ನು ಜಗತ್ತಿನಾದ್ಯಂತ ಎಲ್ಲ ಹದ್ರೋಗ ತಜ್ಞರು ನೇರವಾಗಿ ವೀಕ್ಷಿಸಿ ತಮ್ಮ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಮೆರಿಕ ಹಾಗೂ ಶ್ರೀಲಂಕಾ ಸೇರಿದಂತೆ 8 ರಾಷ್ಟ್ರಗಳ ವೈದ್ಯರ ತಂಡ ಪಾಲ್ಗೊಳ್ಳಲಿದ್ದು, 17 ಮಂದಿ ಹೃದಯ ಸಮಸ್ಯೆಯಿರುವ ಬಡವರಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಈ ಶಸ್ತ್ರಚಿಕಿತ್ಸೆಯನ್ನು ಇಪಿ ಲೈವ್ ಫೌಂಡೇಶನ್ ಸಂಸ್ಥೆ ಸಹಯೋಗದಲ್ಲಿ ಇಪಿ ಲೈವ್-2019 ಎಂಬ ಹೆಸರಿನಡಿ ನೇರ ಪ್ರಸಾರ ಮಾಡಲಾಗುತ್ತಿದ್ದು, ವೈದ್ಯಕೀಯ ಜಗತ್ತಿನ ಅತ್ಯಂತ ವಿನೂತನ ಮತ್ತು ವಿಶೇಷ ಸಮಾವೇಶದಲ್ಲಿ ದೇಶ ವಿದೇಶಗಳ ಖ್ಯಾತ ಹೃದ್ರೋಗ ತಜ್ಞರು ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ಶಸ್ತ್ರ ಚಿಕಿತ್ಸೆಯ ವಿಧಾನ ಮತ್ತು ಸೂಕ್ತ ಮಾರ್ಗವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಹೃದಯ ಬಡಿತವನ್ನೇ ಪ್ರಮುಖ ಕೇಂದ್ರೀಕರಿಸಲಾಗಿದೆ. ದೇಶದಲ್ಲಿ 1.3 ಕೋಟಿ ಜನರಿಗೆ ಇಂತಹ ಚಿಕಿತ್ಸೆ ಅಗತ್ಯವಾಗಿದೆ. ಈ ಸಮಾವೇಶದಲ್ಲಿ 17 ಮಂದಿ ಹೃದ್ರೋಗಿಗಳಿಗೆ ನೇರವಾಗಿ ಶಸ್ತ್ರ ಚಿಕಿತ್ಸೆ ನಡೆಸುವ ಜತೆಗೆ 14 ಪ್ರಕರಣಗಳ ಶಸ್ತ್ರ ಚಿಕಿತ್ಸೆಯ ಚಿತ್ರೀಕರಣ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆಯೂ ವಿಚಾರ ವಿಮರ್ಶೆ ಮಾಡಲಾಗುವುದು. ಶಸ್ತ್ರ ಚಿಕಿತ್ಸೆ ನಡೆಸಲು ಸುಮಾರು ಒಂದು ಕೋಟಿ ರೂ ವೆಚ್ಚವಾಗಲಿದ್ದು ಸಮಾವೇಶದಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸುವ ಜೊತೆಗೆ ಈ ತಂತ್ರಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗುವುದು. ದೇಶದ ವಿವಿಧ ಭಾಗಗಳಿಂದ 150 ತಜ್ಞ ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.