ಬಿಇಎಂಎಲ್ ಕಾರ್ಖಾನೆ ಶೇರು ಮಾರಾಟಕ್ಕೆ ವಿರೋಧ: ಕಾರ್ಮಿಕರ ಪ್ರತಿಭಟನೆ
![ಬಿಇಎಂಎಲ್ ಕಾರ್ಖಾನೆ ಶೇರು ಮಾರಾಟಕ್ಕೆ ವಿರೋಧ: ಕಾರ್ಮಿಕರ ಪ್ರತಿಭಟನೆ ಬಿಇಎಂಎಲ್ ಕಾರ್ಖಾನೆ ಶೇರು ಮಾರಾಟಕ್ಕೆ ವಿರೋಧ: ಕಾರ್ಮಿಕರ ಪ್ರತಿಭಟನೆ](/images/placeholder.jpg)
ಬೆಂಗಳೂರು, ಆ. 29: ಲಾಭದಾಯಕ ಸ್ಥಿತಿಯಲ್ಲಿರುವ ಸರಕಾರಿ ಸ್ವಾಮ್ಯದ ಬಿಇಎಂಎಲ್ ಕಾರ್ಖಾನೆಯ ಶೇ.54ರಷ್ಟು ಷೇರುಗಳ ಪೈಕಿ ಶೇ.26ರಷ್ಟನ್ನು ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬಿಇಎಂಎಲ್ ಕಾರ್ಖಾನೆ ಕಾರ್ಮಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನ ಕಾರ್ಖಾನೆ ಮುಂಭಾಗದಲ್ಲಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ, ಯಾವುದೇ ಕಾರಣಕ್ಕೂ ಕಾರ್ಖಾನೆಯ ಶೇರುಗಳನ್ನು ಮಾರಾಟ ಮಾಡಬಾರದು ಎಂದು ಕೋರಿದರು.
ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆದುಕೊಳ್ಳುವ ಮತ್ತು ಮಾರಾಟ ಮಾಡುವ ನೀತಿಯನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯಬೇಕು. ರಕ್ಷಣಾ ಮಂತ್ರಿಗಳು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಈ ಬಗ್ಗೆ ಧ್ವನಿಎತ್ತಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ಬಿಇಎಂಎಲ್ ಏಷ್ಯಾದಲ್ಲೆ ದೊಡ್ಡ ಸಂಸ್ಥೆಯಾಗಿದ್ದು ಕಾರ್ಮಿಕರ ಬದುಕು ಕಾರ್ಖಾನೆ ಮೇಲೆ ಆಶ್ರಯಿಸಿದೆ. ಅಲ್ಲದೆ, ರಕ್ಷಣಾ ಇಲಾಖೆಗೆ ಆಧುನಿಕ ತಂತ್ರಜ್ಞಾನದ ವಾಹನ ಮತ್ತು ಯುದ್ಧ ಸಾಮಗ್ರಿಗಳನ್ನು ಒದಗಿಸುತ್ತಿದೆ. ಹೀಗಾಗಿ ಇಂತಹ ಕಾರ್ಖಾನೆಗಳನ್ನು ರೋಗಗ್ರಸ್ಥಗೊಳಿಸಲು ಕೈ ಹಾಕಬಾರದೆಂದು ಮನವಿ ಮಾಡಿದರು.