ನ್ಯಾಯಾಂಗ ವ್ಯವಸ್ಥೆಯ ಜಾತೀಯತೆ, ಭ್ರಷ್ಟಾಚಾರದ ಬಗ್ಗೆ ನ್ಯಾಯಾಧೀಶರು ನೀಡಿದ್ದ ಆದೇಶ ವಜಾಗೊಳಿಸಿದ ನ್ಯಾಯಪೀಠ!
ವಿಚಾರಣೆ ನಡೆಸುತ್ತಿದ್ದ ಎಲ್ಲಾ ಪ್ರಕರಣಗಳಿಂದ ಜಸ್ಟಿಸ್ ರಾಕೇಶ್ ಕುಮಾರ್ ಗೆ ಕೊಕ್

ಹೊಸದಿಲ್ಲಿ, ಆ.30: ಅಭೂತಪೂರ್ವ ಕ್ರಮವೊಂದರಲ್ಲಿ ಪಾಟ್ನಾ ಹೈಕೋರ್ಟಿನ 11 ಸದಸ್ಯರ ನ್ಯಾಯಪೀಠವು ನ್ಯಾಯಾಂಗವನ್ನು ಟೀಕಿಸಿ ಜಸ್ಟಿಸ್ ರಾಕೇಶ್ ಕುಮಾರ್ ಅವರ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ವಜಾಗೊಳಿಸಿದೆ.
ಬುಧವಾರ ಜಸ್ಟಿಸ್ ರಾಕೇಶ್ ಕುಮಾರ್ ಅವರು ನೀಡಿದ ತೀರ್ಪು ನ್ಯಾಯಾಂಗದ ಶ್ರೇಣಿ ವ್ಯವಸ್ಥೆ, ನ್ಯಾಯಾಂಗದ ಸಮಗ್ರತೆ ಹಾಗೂ ನ್ಯಾಯಾಲಯದ ಘನತೆ ಮೇಲಿನ ದಾಳಿ ಎಂದು ಬಿಹಾರದ ಅಡ್ವಕೇಟ್ ಜನರಲ್ ಲಲಿತ್ ಕಿಶೋರ್ ಹೇಳಿದ್ದಾರೆ.
ಜಸ್ಟಿಸ್ ರಾಕೇಶ್ ಕುಮಾರ್ ತಮ್ಮ ತೀರ್ಪಿನಲ್ಲಿ ಹೈಕೋರ್ಟ್ ಹಾಗೂ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯಲ್ಲಿನ ಜಾತೀಯತೆ ಹಾಗೂ ಭ್ರಷ್ಟಾಚಾರದ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದರು ಹಾಗೂ ನಿವೃತ್ತ ಅಥವಾ ನಿಧನರಾದ ಕೆಲ ನ್ಯಾಯಾಧೀಶರ ವಿರುದ್ಧವೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರು ಎಂದು ಕಿಶೋರ್ ಹೇಳಿದ್ದಾರೆ.
ಈ ತೀರ್ಪನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ಅವರು 11 ನ್ಯಾಯಾಧೀಶರ ಪೀಠ ರಚಿಸಿದ್ದು ಈ ಪೀಠ ಗುರುವಾರ ಜಸ್ಟಿಸ್ ರಾಕೇಶ್ ಕುಮಾರ್ ಅವರು ನೀಡಿದ್ದ ಆದೇಶವನ್ನು ವಜಾಗೊಳಿಸಿದೆ. ಈ ನಿರ್ದಿಷ್ಟ ಆದೇಶವನ್ನು ಎಲ್ಲಿಯೂ ಪಸರಿಸದಂತೆಯೂ ನ್ಯಾಯಪೀಠ ಹೇಳಿದೆಯಲ್ಲದೆ ಜಸ್ಟಿಸ್ ಕುಮಾರ್ ಅವರು ವಿಚಾರಣೆ ನಡೆಸುತ್ತಿದ್ದ ಎಲ್ಲಾ ಪ್ರಕರಣಗಳಿಂದ ಅವರನ್ನು ಕೈಬಿಡಲಾಗಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಕೆ ಪಿ ರಾಮಯ್ಯ ಅವರಿಗೆ ಪಾಟ್ನಾ ವಿಜಿಲೆನ್ಸ್ ನ್ಯಾಯಾಲಯ ನೀಡಿದ್ದ ಜಾಮೀನಿನ ವಿಚಾರವನ್ನು ಸ್ವಯಂಪ್ರೇರಿತರಾಗಿ ಜಸ್ಟಿಸ್ ಕುಮಾರ್ ಕೈಗೆತ್ತಿಕೊಂಡು ಆದೇಶ ಹೊರಡಿಸಿದ್ದರು. ಭ್ರಷ್ಟಾಚಾರ ಆರೋಪ ಹೊತ್ತ ಈ ಮಾಜಿ ಅಧಿಕಾರಿಯ ನಿರೀಕ್ಷಣಾ ಜಾಮೀನನ್ನು ಜಸ್ಟಿಸ್ ಕುಮಾರ್ ಅವರೇ ಒಂದು ವರ್ಷದ ಹಿಂದೆ ತಿರಸ್ಕರಿಸಿದ್ದರು.







