ಅರಣ್ಯ ಕುರಿತ ಅಧ್ಯಯನದಿಂದ ಗುಣಮಟ್ಟದ ವರದಿ: ಡಿಸಿ ಜಗದೀಶ್
‘ವನ್ಯಜೀವಿ ಪತ್ರಿಕೋದ್ಯಮ’ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಉಡುಪಿ, ಆ.30: ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಕುರಿತ ಇಂದಿನ ಪತ್ರಿಕಾ ಬರವಣಿಗೆಗಳಲ್ಲಿ ಸೂಕ್ಷ್ಮತೆ ಹಾಗೂ ಪ್ರೌಢಿಮೆ ಇಲ್ಲವಾಗಿದೆ. ಯಾವುದೇ ವಿಚಾರದ ಬಗ್ಗೆ ಅಧ್ಯಯನ ಮಾಡಿದರೆ ಮಾತ್ರ ಪ್ರೌಢಿಮೆ ಬರಲು ಸಾಧ್ಯ. ಆದುದರಿಂದ ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ಅಧ್ಯಯನ ಮಾಡಿ ಬರೆದಾಗ ಗುಣಮಟ್ಟ ವರದಿ ಮೂಡಿ ಬರಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅರಣ್ಯ ಇಲಾಖೆ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಕೃಪಾಕರ ಸೇನಾನಿಯವರ ಅಗ್ರ ಗೋಷ್ಠಿಯೊಂದಿಗೆ ವನ್ಯಜೀವಿ ಪತ್ರಿಕೋದ್ಯಮ ಮತ್ತು ಅರಣ್ಯ ಸಂರಕ್ಷಣೆ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಹಳ ಆಸಕ್ತಿಯಿಂದ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಯಾವುದೇ ವಿಚಾರವನ್ನು ಕಾಳಜಿ ವಹಿಸಿ, ತಿಳಿದು ಬರೆಯು ವವರು ಸಂಖ್ಯೆ ಕೂಡ ಈ ಕ್ಷೇತ್ರದಲ್ಲಿ ಕಡಿಮೆ ಇದೆ. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಹಾಗೂ ಅಧ್ಯಯನ ಮಾಡಿ ಬರೆಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಅರಣ್ಯ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಅರಣ್ಯವನ್ನು ಚಿತ್ರದಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯವನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಕಷ್ಟ ಅನುಭವಿಸಬೇಕಾಗು ತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಕೋಲಾರದಂತಹ ಜಿಲ್ಲೆಗಳಲ್ಲಿ ಕುಡಿಯಲು ನೀರೇ ಸಿಗುತ್ತಿಲ್ಲ. ಪ್ರತಿದಿನ 10-15 ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. 1500 ಅಡಿ ಆಳ ಕೊರೆದು ನೀರು ಕೊಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಆದರೆ ಅಷ್ಟು ಆಳದಲ್ಲಿ ಸಿಗುವುದು ನೀರಲ್ಲ, ಅದು ವಿವಿಧ ಲೋಹಗಳನ್ನು ಒಳಗೊಂಡ ವಿಷವಾಗಿದೆ. ಇಂತಹ ನೀರನ್ನು ಬಹಳ ದಿನಗಳ ಕಾಲ ಸೇವಿಸಿದರೆ ಮನುಷ್ಯನ ಬದುಕು ದುಸ್ತರ ಆಗಲಿದೆ. ಇದಕ್ಕೆಲ್ಲವೂ ನಾವೇ ಹೊಣೆಗಾರರಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕೃಪಾಕರ ಸೇನಾನಿ, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಶಂಕರನಾರಾಯಣದ ವಲಯ ಅರಣ್ಯಾಧಿಕಾರಿ ಎ.ಎ ಗೋಪಾಲ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಸ್ವಾಗತಿಸಿದರು. ವಿದ್ಯಾರ್ಥಿ ಗೌತಮ್ ವಂದಿಸಿದರು. ಬಳಿಕ ಕೃಪಾಕರ ಸೇನಾನಿ ನಿರ್ದೇಶನದ ವಾಕಿಂಗ್ ವಿಥ್ ವೋಲ್ಫ್ ಸಾಕ್ಷಚಿತ್ರ ಪ್ರದರ್ಶನ ನಡೆಯಿತು.
ರಿಪೋರ್ಟರ್ ಕ್ರಿಯೇಟರ್ ಆಗಬಾರದು
ಇಂದು ರಿಪೋರ್ಟರ್(ವರದಿಗಾರ), ಕೇವಲ ವರದಿಗಾರರಾಗಿರದೇ ಕ್ರಿಯೇಟರ್(ಸುದ್ದಿ ಸೃಷ್ಠಿ ಮಾಡುವವರು) ಆಗುತ್ತಿದ್ದಾರೆ. ಯಾವುದೇ ವಿಷಯ ಹಾಗೂ ಸಮಾಜದಲ್ಲಿ ನಡೆಯುವ ಆಗುಹೋಗುಗಳ ವಿಚಾರವನ್ನು ಸುದ್ದಿಯ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಬೇಕೆ ಹೊರತು ಅದನ್ನು ತಿರುಚಿ ಬರೆಯುವ ಮೂಲಕ ಸುದ್ದಿಯನ್ನು ತಾವೇ ಸೃಷ್ಠಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಇಂದು ಪತ್ರಿಕಾ ವರದಿಗಳು ಸಮಾಜದ ಮೇಲೆ ಬಹಳಷ್ಟು ಪ್ರಭಾವ ಬೀರು ವುದರಿಂದ ಪತ್ರಕರ್ತರು ಸುದ್ದಿ ಮಾಡುವ ಮೊದಲು ಸಮಾಜದ ಕಳಕಳಿ, ಕಾಳಜಿ, ಸೌಹಾರ್ದತೆಯನ್ನು ಉದ್ದೇಶವಾಗಿ ಇಟ್ಟುಕೊಳ್ಳಬೇಕಾಗಿದೆ. ಪತ್ರಕರ್ತರ ಬದ್ಧತೆ ಸಮಾಜವನ್ನು ತಿದ್ದುವ ಹಾಗೂ ಸ್ವಾಸ್ಥದ ಕಡೆ ಇರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.







