ಉಡುಪಿ: 21 ದೇಶಗಳ ನೋಟು ಬಳಸಿ 12 ಅಡಿ ಎತ್ತರದ ಗಣೇಶ ಕಲಾಕೃತಿ ರಚನೆ

ಉಡುಪಿ, ಆ.30: ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು ಹಾಗೂ ರವಿ ಹಿರೇಬೆಟ್ಟು ಇವರು ಇದೀಗ ವಿಶ್ವದ 21 ದೇಶಗಳ ಕರೆನ್ಸಿ ನೋಟುಗಳನ್ನು ಬಳಸಿ ಗಣೇಶನ ವಿಶಿಷ್ಟ ಕಲಾಕೃತಿಯೊಂದನ್ನು ರಚಿಸಿದ್ದಾರೆ.
ಉಡುಪಿಯ ಸಾಯಿರಾಧ ಮೋಟಾರ್ಸ್‌ನ ಸಹಯೋಗದೊಂದಿಗೆ ಈ ಕಲಾಕೃತಿಯನ್ನು ರಚಿಸಿರುವ ಈ ಕಲಾವಿದರ ಅಪರೂಪದ ಕಲಾಕೃತಿಯು ಉಡುಪಿಯ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸಾಯಿರಾಧ ಮೋಟಾರ್ಸ್ ನಲ್ಲಿ (ಗೀತಾಂಜಲಿ ಮಾರ್ಗ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕಲಾಕೃತಿಯಲ್ಲಿ ಭಾರತದ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿದೆ.ಇದಲ್ಲದೇ ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಭೂತಾನ್, ಅಫ್ಘಾನಿಸ್ತಾನ್, ಬಹರೈನ್, ಯುಎಇ, ಅಮೇರಿಕಾ, ಇಸ್ರೇಲ್ ಮುಂತಾದ 21 ದೇಶಗಳ ಕೃತಕ ನೋಟುಗಳನ್ನು ಕಲಾತ್ಮಕವಾಗಿ ಪೋಣಿಸಲಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಸ್ಯಾಂಡ್‌ಹಾರ್ಟ್‌ನ ಕಲಾವಿದರು ಪೇಪರ್‌ಕಪ್, ಹ್ಯಾಂಡ್‌ಮೇಡ್ ಪೇಪರ್, ಗುಡಿಕೈಗಾರಿಕೆಯ ವಸ್ತುಗಳು, ಬಿಸ್ಕೇಟ್ ಗಣೇಶ, ದಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆ ಪಡೆದಿದ್ದರು.
ಈ ಕಲಾಕೃತಿಯ ಅಧಿಕೃತ ಉದ್ಘಾಟನೆ ಶನಿವಾರ ಬೆಳಗ್ಗೆ 10:30ಕ್ಕೆ ನಡೆಯಲಿದೆ ಎಂದು ಕಲಾವಿದ ಶ್ರೀನಾಥ್ ಮಣಿಪಾಲ ತಿಳಿಸಿದ್ದಾರೆ.








