ನಮ್ಮಲ್ಲಿ 1 ಲ.ಕೋ.ರೂ.ಗಳಿವೆ, ಆದರೆ ವ್ಯವಹಾರ ಎಂದಿನಂತಿಲ್ಲ: ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಹೊಸದಿಲ್ಲಿ, ಆ.30: ಆರ್ಥಿಕತೆಯಲ್ಲಿ ನಗದು ಬಿಕ್ಕಟ್ಟಿನ ಕುರಿತು ಹೆಚ್ಚುತ್ತಿರುವ ಕಳವಳಗಳ ನಡುವೆಯೇ ಎಸ್‌ಬಿಐ ಅಧ್ಯಕ್ಷ ರಜನೀಶ ಕುಮಾರ ಅವರು,ಹೂಡಿಕೆಗಾಗಿ ಸಾಲಗಳನ್ನು ನೀಡಲು ತನ್ನ ಬ್ಯಾಂಕಿನ ಬಳಿ ಕನಿಷ್ಠ ಒಂದು ಲಕ್ಷ ಕೋಟಿ ರೂ.ಗಳಿವೆ ಎಂದು ಶುಕ್ರವಾರ ಹೇಳಿದ್ದಾರೆ. ಸಾಲಗಳನ್ನು ನೀಡಲು ಬ್ಯಾಂಕುಗಳ ಹಿಂಜರಿಕೆಯು ಆರ್ಥಿಕ ಮಂದಗತಿಯಲ್ಲಿ ಪಾತ್ರವನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಈಗ ಎದುರಾಗಿರುವ ನಗದು ಬಿಕ್ಕಟ್ಟನ್ನು ದೇಶವು ಕಳೆದ 70 ವರ್ಷಗಳಲ್ಲಿ ಎಂದೂ ಕಂಡಿರಲಿಲ್ಲ ಎಂದು ಕಳೆದ ವಾರ ಹೇಳಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ವಿಶ್ವಾಸದ ಕೊರತೆ ಕಂಡು ಬರುತ್ತಿದೆ. ಖಾಸಗಿ ಕ್ಷೇತ್ರದೊಳಗೆ ಇತರರಿಗೆ ಸಾಲ ನೀಡಲು ಯಾರೂ ಬಯಸುತ್ತಿಲ್ಲ ಎಂದಿದ್ದರು.
ನೀತಿ ಆಯೋಗದ ಹೇಳಿಕೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ರಜನೀಶ್,ಅದನ್ನು ನೀವು ನೀತಿ ಆಯೋಗಕ್ಕೇ ಕೇಳಬೇಕು. ಎಸ್‌ಬಿಐಗೆ ನಗದು ಕೊರತೆ ಸಮಸ್ಯೆಯಿಲ್ಲ, ಅದು ಒಂದೇ ತಿಂಗಳಲ್ಲಿ ಒಂದು ಲ.ಕೋ.ರೂ.ಗೂ ಅಧಿಕ ಸಾಲವನ್ನು ನೀಡಬಲ್ಲದು. ಇಡೀ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ನಗದು ಕೊರತೆಯಿಲ್ಲ. ಈಗ ಸಾಲಗಳನ್ನೂ ನೀಡಲಾಗುತ್ತಿದೆ ಎಂದರು. ಆದರೆ ಬೃಹತ್ ಯೋಜನೆಗಳ ಸಂಖ್ಯೆ ಕಡಿಮೆಯಿದೆ ಎಂದು ಅವರು ಹೇಳಿದರು.
ಇನ್ನಷ್ಟು ಕೆದಕಿದಾಗ,ಬ್ಯಾಂಕುಗಳು ಸಾಲ ನೀಡಿಕೆಯಲ್ಲಿ ಎಚ್ಚರಿಕೆ ವಹಿಸುತ್ತಿವೆ ಎನ್ನುವುದನ್ನು ಒಪ್ಪಿಕೊಂಡ ಅವರು,‘ ಬ್ಯಾಂಕುಗಳ ಧೋರಣೆಯಲ್ಲಿ ಕೆಲ ಬದಲಾವಣೆಗಳಾಗಿವೆ. ನಾವು ಖಂಡಿತ ಎಚ್ಚರಿಕೆ ವಹಿಸಿದ್ದೇವೆ. ಏಕೆಂದರೆ ವ್ಯವಹಾರವು ಇನ್ನು ಎಂದಿನಂತಿರುವುದಿಲ್ಲ. ನಾವು ಮೌಲ್ಯಾಂಕನ,ಸಾಲದ ಅವಶ್ಯಕತೆ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ವಹಿಸಿದ್ದೇವೆ ’ ಎಂದರು.
‘ಕಂಪನಿಗಳು ತಮ್ಮ ಸಾಲಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ ಮತ್ತು ಇದು ಕೆಟ್ಟದ್ದೇನಲ್ಲ. ಅವು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರೆ ಕಾರ್ಪೊರೇಟ್ ಕ್ಷೇತ್ರಕ್ಕೆ ಸಾಲದ ಹರಿವು ನಮ್ಮ ನಿರೀಕ್ಷೆಯ ಮಟ್ಟದಲ್ಲಿರುವುದಿಲ್ಲ. ಕೆಲವು ರಚನಾತ್ಮಕ ಬದಲಾವಣೆಗಳು ನಡೆಯುತ್ತಿವೆ ಮತ್ತು ಇವು ಒಳ್ಳೆಯದಕ್ಕೇ ಆಗುತ್ತಿವೆ’ ಎಂದರು.







