ಕಾಂಗೊ: ಎಬೋಲಾದಿಂದ ಸತ್ತವರ ಸಂಖ್ಯೆ 2,000ಕ್ಕೂ ಅಧಿಕ

ಕಿನ್‌ಶಾಸ (ಕಾಂಗೊ), ಆ. 30: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಒಂದು ವರ್ಷದ ಅವಧಿಯಲ್ಲಿ ಎಬೋಲಾ ರೋಗದಿಂದಾಗಿ ಮೃತಪಟ್ಟವರ ಸಂಖ್ಯೆ 2,000ವನ್ನು ಮೀರಿದೆ ಎಂದು ಸರಕಾರ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ.
ಅದೇ ವೇಳೆ, ಖಚಿತಪಟ್ಟ ಎಬೋಲಾ ಪ್ರಕರಣಗಳು ಮತ್ತು ಸಂಭಾವ್ಯ ಎಬೋಲಾ ಪ್ರಕರಣಗಳ ಸಂಖ್ಯೆ 3,000ವನ್ನು ದಾಟಿದೆ ಎಂದು ರೋಗದ ಚಿಕಿತ್ಸೆಯ ಮೇಲೆ ನಿಗಾ ಇಡುತ್ತಿರುವ ಸರಕಾರಿ ತಂಡ ಹೇಳಿದೆ.
ಪರಿಣಾಮಕಾರಿ ಲಸಿಕೆ ಮತ್ತು ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಿದ ಹೊರತಾಗಿಯೂ, ಪೂರ್ವ ಕಾಂಗೊದ ಅತಿ ದೂರದ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಈ ಭೀಕರ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಹೋರಾಡುತ್ತಿದ್ದಾರೆ. ಇಲ್ಲಿ ಹೆಚ್ಚಿನ ಸ್ಥಳೀಯರು ಆರೋಗ್ಯ ಕಾರ್ಯಕರ್ತರನ್ನು ಸಂದೇಹದಿಂದ ನೋಡುತ್ತಿದ್ದಾರೆ.
‘‘ಚಿಕಿತ್ಸೆ ಫಲಪ್ರದವಾಗಬೇಕಾದರೆ, ಜನರು ಆರೋಗ್ಯ ಕಾರ್ಯಕರ್ತರು ಮತ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಯನ್ನು ನಂಬಬೇಕು. ಇದಕ್ಕೆ ಸಮಯ, ಸಂಪನ್ಮೂಲಗಳು ಮತ್ತು ಅಗಾಧ ಕಠಿಣ ಪರಿಶ್ರಮ ಬೇಕಾಗುತ್ತದೆ’’ ಎಂದು ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ದ ರೆಡ್ ಕ್ರಾಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.