ರಾಜಕಾರಣಿಗಳ ಚೇಲಗಳಿಂದ ಪಶ್ಚಿಮಘಟ್ಟ ಪರ ವರದಿಗಳಿಗೆ ವಿರೋಧ: ದಿನೇಶ್ ಹೊಳ್ಳ

ಉಡುಪಿ, ಆ.30: ಪಶ್ಚಿಮ ಘಟ್ಟ ಉಳಿಸುವ ನಿಟ್ಟಿನಲ್ಲಿ ತಯಾರಿಸಲಾದ ಡಾ.ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿಯನ್ನು ವಿರೋಧಿಸು ವವರು ಅರಣ್ಯ ಅತಿಕ್ರಮಣ ಮಾಡಿಕೊಂಡಿರುವ ರಾಜಕಾರಣಿಗಳ ಹಿಂದಿನ ಚೇಲಗಳು. ಈ ವರದಿಗಳು ಜಾರಿಯಾಗದ ಪರಿಣಾಮ ಇಡೀ ಪಶ್ಚಿಮಘಟ್ಟ ಬೇರೆ ಬೇರೆ ಮಾಫಿಯಾಗಳಿಗೆ ಬಲಿಯಾಗುತ್ತಿವೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಆರೋಪಿಸಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅರಣ್ಯ ಇಲಾಖೆ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಚಾರ ಸಂಕಿರಣದ ‘ಹಸಿರು ಸಂವೇದನೆ’ ಕರಾವಳಿ ನೆಲ- ಜಲ-ಜೀವನ ಕುರಿತು ತಜ್ಞರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಇತ್ತೀಚೆಗೆ ಸಂಭವಿಸಿರುವುದು ಜಲಸ್ಫೋಟವೇ ಹೊರತು ನೆರೆ ಅಲ್ಲ. ಇದಕ್ಕೆ ಕಾರಣ ಪಶ್ಚಿಮಘಟ್ಟಗಳ ಮೇಲಿನ ಮಾನವ ದಬ್ಬಾಳಿಕೆ. ಪಶ್ಚಿಮಘಟ್ಟದ ಮೇಲ್ಮೈಯಲ್ಲಿರುವ ಹುಲ್ಲುಗಾವಲು ವಿವಿಧ ಯೋಜನೆ, ರೆಸಾರ್ಟ್ ಮಾಫಿಯ ಗಳಿಂದ ಕಣ್ಮರೆಯಾಗುತ್ತಿದೆ. ಇದರಿಂದ ಭೂಕುಸಿತ ಉಂಟಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅವರು ತಿಳಿಸಿದರು.
ಎತ್ತಿನಹೊಳೆ ಯೋಜನೆಗೂ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೂ ಸಂಬಂಧ ಇದೆ. ನಿಜವಾಗಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಅಲ್ಲ. ಅದೊಂದು ಬೆಂಗಳೂರು ಕೈಗಾರಿಕಾ ಮಾಫಿಯಾ ಆಗಿದೆ. ಓಟು, ಸೀಟು, ನೋಟಿಗಾಗಿ ಇಡೀ ನದಿಯನ್ನು ಬಲಿಕೊಡಲಾಗುತ್ತಿದೆ. ಒಂದೆಡೆ ಪಶ್ಚಿಮಘಟ್ಟ ಉಳಿಸಿ ಹೇಳುವ ಸರಕಾರ, ಇನ್ನೊಂದೆಡೆ ವಿವಿಧ ರೀತಿಯ ಮಾಫಿಯಾಗಳಿಗೆ ಪರವಾನಿಗೆ ನೀಡುತ್ತಿದೆ ಎಂದು ಅವರು ದೂರಿದರು.
ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಮಾತನಾಡಿ, ಪರಿಸರ ಸಂಬಂಧ ಚಳವಳಿಗಳು ಆರೋಗ್ಯಕರ ಜೀವಜಾಲದ ಧ್ವನಿಗಳಾಗಿವೆ. ಚಳವಳಿಗಳು ನಮ್ಮನ್ನು ಬೆಳೆಸುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಆ ಹೋರಾಟ ದಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.
ನದಿ ನೀರು ಸಮುದ್ರ ಸೇರುವುದು ವ್ಯರ್ಥ ಎಂಬುದಾಗಿ ವಾದಿಸುವುದು ಮೂರ್ಖತನ. ಮರುಳು ತೆಗೆಯುವುದರಿಂದ ನದಿ ನೀರು ಬೇಸಿಗೆಯಲ್ಲಿ ಬೇಗನೆ ಬತ್ತಿ ಹೋಗುತ್ತದೆ. ಅಲ್ಲದೆ ಹಿನ್ನೀರಿನ ಪ್ರದೇಶದ ಉಪ್ಪಿನಾಂಶ ಇನ್ನಷ್ಟು ಕಿ.ಮೀ. ವಿಸ್ತಾರವಾಗುತ್ತದೆ ಎಂದು ಅವರು ತಿಳಿಸಿದರು.
ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ನಾವು ಇಂದು ಜ್ಞಾನದ ಕೊರತೆಯಿಂದ ಜೀವಜಾಲವನ್ನೇ ನಾಶ ಮಾಡುತ್ತಿದ್ದೇವೆ. ಮಡಿವಂತಿಕೆ, ಅಸಹ್ಯ, ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರೆ ಹಾವು ಸೇರಿದಂತೆ ನಮ್ಮ ಜೀವ ಜಾಲವನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೈಸೂರಿನ ವನ್ಯಜೀವಿ ಶಾಸ್ತ್ರಜ್ಞ ಎಸ್.ಎಸ್.ಸುನೀಲ್, ಪಕ್ಷಿ ತಜ್ಞ ಶಿವಶಂಕರ್ ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.








