ವಿಲೀನದ ಬಳಿಕ ಮಾಯವಾಗಲಿರುವ ಬ್ಯಾಂಕ್ ಗಳು ಯಾವುವು?: ಇಲ್ಲಿದೆ ವಿವರ

ಹೊಸದಿಲ್ಲಿ, ಆ.30: ಸಾರ್ವಜನಿಕ ರಂಗದ 10 ಬ್ಯಾಂಕ್ ಗಳನ್ನು 4 ಬ್ಯಾಂಕ್ ಗಳಾಗಿ ಇಂದು ವಿಲೀನಗೊಳಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಈ ಹಣಕಾಸು ವರ್ಷದಲ್ಲಿ 18ರಲ್ಲಿ 14 ಸಾರ್ವಜನಿಕ ರಂಗದ ಬ್ಯಾಂಕ್ ಗಳು ಲಾಭದಲ್ಲಿವೆ” ಎಂದಿದ್ದರು.
ಈ ವಿಲೀನ ಪ್ರಕ್ರಿಯೆಯ ಪ್ರಕಾರ, ಇಂಡಿಯನ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಇಂಡಿಯನ್ ಬ್ಯಾಂಕ್ ಮುಂದುವರಿಯಲಿದೆ ಹಾಗು ಅಲಹಾಬಾದ್ ಬ್ಯಾಂಕ್ ಇನ್ನು ಇರುವುದಿಲ್ಲ.
ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ ಬಿ) , ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಪಿಎನ್ ಬಿ ಬ್ಯಾಂಕ್ ಮುಂದುವರಿಯಲಿದೆ. ಇನ್ನುಳಿದ ಎರಡು ಬ್ಯಾಂಕ್ ಗಳು ಅಸ್ತಿತ್ವ ಕಳೆದುಕೊಳ್ಳಲಿದೆ.
ಯುನಿಯನ್ ಬ್ಯಾಂಕ್ ಆಫ್ ಇಂಡಿಯ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳು ವಿಲೀನಗೊಳ್ಳಲಿದ್ದು, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಂದುವರಿಯಲಿದೆ. ಆಂಧ್ರ ಬ್ಯಾಂಕ್ ಮತ್ತು ಕರ್ನಾಟಕದ ಜನರ ಮೆಚ್ಚಿನ ಕಾರ್ಪೊರೇಷನ್ ಬ್ಯಾಂಕ್ ಇನ್ನು ನೆನಪು ಮಾತ್ರ.
ಇದೇ ರೀತಿ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಕೆನರಾ ಬ್ಯಾಂಕ್ ಮುಂದುವರಿಯಲಿದೆ. ಸಿಂಡಿಕೇಟ್ ಬ್ಯಾಂಕ್ ಇತಿಹಾಸದ ಪುಟ ಸೇರಲಿದೆ.
2017ರಲ್ಲಿ 27 ಸಾರ್ವಜನಿಕ ರಂಗದ ಬ್ಯಾಂಕ್ ಗಳಿದ್ದು, ಈಗ 12ಕ್ಕೆ ತಲುಪಿದೆ. ಕಳೆದ ವರ್ಷವಷ್ಟೇ ಸರಕಾರ ಬ್ಯಾಂಕ್ ಆಫ್ ಬರೋಡ ಜೊತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕನ್ನು ವಿಲೀನಗೊಳಿಸಿತ್ತು.







