ಮಡಂತ್ಯಾರು: 'ಉಪನ್ಯಾಸಗಳ ಗುಚ್ಛ' ಪುಸ್ತಕ ಬಿಡುಗಡೆ ಸಮಾರಂಭ

ಬೆಳ್ತಂಗಡಿ: ನಾವು ಹತ್ತು ಪುಸ್ತಕಗಳನ್ನು ಓದಿದಾಗ ನಮಗೆ ಸಿಗಬಹುದಾದ ಅನುಭವ, ಜ್ಞಾನ, ವಿಚಾರಗಳು ಅರವಿಂದಚೊಕ್ಕಾಡಿ ಅವರ ಇಂದು ಬಿಡುಗಡೆಗೊಂಡ `ಉಪನ್ಯಾಸ ಗುಚ್ಛ' ಪುಸ್ತಕದಲ್ಲಿ ದೊರೆಯಲು ಸಾಧ್ಯವಿದೆ ಎಂಬ ಮಾತು ಅತಿಶಯೋಕ್ತಿಯಲ್ಲ; ಇದು ಅವರ ಬರಹದಗಟ್ಟಿತನ ಮತ್ತು ಸಹಜತೆ ಎಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್‍ಕಾಲೇಜಿನ ಉಪನ್ಯಾಸಕ ಡಾ.ಎನ್.ಎಂ. ಜೋಸೆಫ್ ಹೇಳಿದರು.
ಅವರು ಶುಕ್ರವಾರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾಹಿತಿ, ಅಂಕಣಕಾರ ಅರವಿಂದಚೊಕ್ಕಾಡಿ ಅವರ 'ಉಪನ್ಯಾಸಗಳ ಗುಚ್ಛ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯಿಸುತ್ತಾ ಮಾತನಾಡಿದರು. ಬದುಕಿನ ಅರ್ಥ ಕಳೆದುಕೊಂಡು ಯಾವುದೋ ಗುಂಗಿನಲ್ಲಿ ದಿನ ಕಳೆಯುತ್ತಿರುವ ಯುವ ಸಮೂಹಕ್ಕೆ ನಿಜವಾಗಿ ಯಾವರೀತಿ ಬದುಕಬೇಕು ಎಂಬುದಕ್ಕೆ ಈ ಪುಸ್ತಕ ಉತ್ತಮ ಮಾರ್ಗದರ್ಶಿಯಾಗಿದೆ ಕೃತಿಯನ್ನು ಓದಿದರೆ ನಮ್ಮ ಜ್ಞಾನದ ಪರಿಧಿ ವಿಕಾಸವಾಗುತ್ತದೆ ಎಂದರು.
ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಮಡಂತ್ಯಾರು ಚರ್ಚಿನ ಧರ್ಮಗುರು ವಂ. ಬೇಸಿಲ್ ವಾಸ್‍ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅರವಿಂದಚೊಕ್ಕಾಡಿ ಅವರ ಶಿಷ್ಯರಾದ ಸುಜಾತಾ ಭುವನ್ ಪುದುವೆಟ್ಟು ಹಾಗೂ ಉದ್ಯಮಿ ಜಿನೇಶ್‍ಜೈನ್ ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕೃತಿಯ ಲೇಖಕ ಅರವಿಂದಚೊಕ್ಕಾಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಸಾಹಿತ್ಯ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶೃತಿ ವಂದಿಸಿದರು.







