ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಸಮಾಲೋಚನೆ

ಬೆಂಗಳೂರು, ಆ. 30: ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಹಾಗೂ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಿದರು.
ಶುಕ್ರವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬಾಧಿತ ಪ್ರದೇಶಗಳಲ್ಲಿ ಕೂಡಲೇ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಿರು ವಿಮಾನ ನಿಲ್ದಾಣ, ಅರಣ್ಯ ವಿಷಯಗಳು, ಕಳಸ ತಾಲೂಕು ರಚನೆ, ಸಾರ್ವಜನಿಕ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ಜಲಧಾರೆ ಯೋಜನೆ, ಮಳಲೂರು ಏತ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.
ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಟೌನ್‌ಶಿಪ್‌ನ ಕಟ್ಟಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯಾವುದಾದರೂ ತರಬೇತಿ ಕೇಂದ್ರ ಕ್ಯಾಂಪಸ್ ಆಗಿ ರೂಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಜಲಧಾರೆ ಯೋಜನೆಯಡಿ ಕುಡಿಯುವ ನೀರು ಪೂರೈಸಲು ರೂಪಿಸಿರುವ 616 ಕೋಟಿ ರೂ.ಯೋಜನೆಯ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
.jpg)







