ಪುತ್ತೂರು: ಬೈಕ್ ಅಪಘಾತ ಗಾಯಾಳು ಮೃತ್ಯು
ಪುತ್ತೂರು: ಕಳೆದ 6 ತಿಂಗಳ ಹಿಂದೆ ಅಪಘಾತಕ್ಕೀಡಾಗಿ ಕೋಮ ಸ್ಥಿತಿಯಲ್ಲಿದ್ದ ಪುತ್ತೂರು ನಗರಸಭೆ ಸದಸ್ಯೆ ಯಶೋಧಾ ಹರೀಶ್ ಬಿರಾವು ಅವರ ಪತಿ ಹರೀಶ್ ಬಿರಾವು (45) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಪೆರಿಯತ್ತೋಡಿ ಬಿರಾವು ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ಹರೀಶ್ ಬಿರಾವು ಅವರು ಮಂಗಳೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ವಹಿಸಿಕೊಂಡ ಅಲ್ಯೂಮಿನಿಯಂ ಕೆಲಸಕ್ಕೆಂದು ಬೈಕ್‍ನಲ್ಲಿ ಮಾ.1ರಂದು ತನ್ನ ಸಹಾಯಕನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಮಂಗಳೂರು ಬೈಕಂಪಾಡಿಯಲ್ಲಿ ಟ್ಯಾಂಕರ್ ವೊಂದು ಅವರ ಬೈಕ್‍ಗೆ ಡಿಕ್ಕಿಯಾಗಿತ್ತು. ಅಪಘಾತದಿಂದಾಗಿ ಹರೀಶ್ ಬಿರಾವು ಮತ್ತು ಸಹಾಯಕ ಗಾಯಗೊಂಡಿದ್ದು, ಹರೀಶ್ ಬಿರಾವು ಅವರಿಗೆ ತಲೆಗೆ ತೀವ್ರ ಗಾಯವಾಗಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರ ಜೊತೆಗಿದ್ದ ಸಹಾಯಕ ಸಣ್ಣಪುಟ್ಟ ಗಾಯದೊಂದಿ ಪಾರಾಗಿದ್ದರು. ತೀವ್ರ ಗಾಯಗೊಂಡ ಹರೀಶ್ ಬಿರಾವು ಅವರು ಕೋಮ ಸ್ಥಿತಿಯಲ್ಲಿದ್ದು, ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾರೆ.
ಮೃತರು ತಂದೆ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.





