ಸೆ.1: ಎಚ್.ಆರ್.ಎಸ್. ಸಂಸ್ಥೆಯಿಂದ ರಿಲೀಫ್ ಸೆಲ್ ಉದ್ಘಾಟನೆ
ಭಟ್ಕಳ: ಹ್ಯೂಮನೆಟೇರಿಯನ್ ರಿಲೀಫ್ ಸೂಸೈಟಿ ವತಿಯಿಂದ ಸೆ.1 ರಂದು ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ‘ರಿಲೀಫ್ ಸೆಲ್’ ಉದ್ಘಾಟಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ತಿಳಿಸಿದ್ದಾರೆ.
ಇತ್ತಿಚೆಗೆ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನೆರೆಹಾವಳಿಯಿಂದಾಗಿ ಬಹಳಷ್ಟು ತೊಂದರೆಗಳನ್ನು ರಾಜ್ಯದ ಜನತೆ ಅನುಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಎಚ್.ಆರ್.ಎಸ್.ಸಂಸ್ಥೆಯಿಂದ ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿನೀಡಿ ಅಲ್ಲಿನ ಸರ್ವೆ ನಡೆಸಿದ್ದು ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ಒಂದೇ ಗ್ರಾಮದಲ್ಲಿ ಹತ್ತಾರು ಕುಟುಂಬಗಳು ತಮ್ಮ ಮನೆಮಠಗಳನ್ನು ಕಳೆದುಕೊಂಡಿದ್ದು ಹ್ಯೂಮನೆಟೇರಿಯನ್ ರಿಲೀಫ್ ಸೂಸೈಟಿಯಿಂದ ಅವರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಭಟ್ಕಳದ ಕೆ.ಎಚ್.ಬಿ. ಕಾಲೋನಿಯಲ್ಲಿ ಒಂದು ಶಾಶ್ವತ ‘ರಿಲೀಫ್ ಸೆಲ್’ನ ಘಟಕವನ್ನು ಆರಂಭಿಸಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆ.1 ರಂದು ಸಂಜೆ 5ಗಂಟೆಗೆ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಹಾಗೂ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿಯವರ ಪ್ರಾರ್ಥನೆಯೊಂದಿಗೆ ರಿಲೀಫ್ ಸೆಲ್ ಉದ್ಘಾಟನೆಗೊಳ್ಳಲಿದೆ.
ಭಟ್ಕಳ ತಹಸಿಲ್ದಾರ್ ವಿ.ಸಿ.ಕೊಟ್ರಳ್ಳಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡುವ ಹಣ, ಬಟ್ಟೆ, ವಸ್ತು ಹಾಗೂ ಮತ್ತಿತರ ದಿನಬಳಕೆಯ ಸಾಮಾನುಗಳನ್ನು ಸ್ವೀಕರಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9008113501/ 9986203591/ 6364282285 ಗೆ ಸಂರ್ಪಕಿಸಬೇಕೆಂದು ಕೋರಲಾಗಿದೆ.







