ದೇಶಪ್ರೇಮಿಗಳು ಒಂದಾಗಿ ಫ್ಯಾಸಿಸ್ಟ್ ಶಕ್ತಿಗಳ ಅಟ್ಟಹಾಸವನ್ನು ಎದುರಿಸಬೇಕಾಗಿದೆ: ಶಾಫಿ ಬೆಳ್ಳಾರೆ

ಮಂಗಳೂರು : ಭಾರತ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿರುವ ಗುಂಪು ಹತ್ಯೆಗಳು, ಗುಂಪು ಹಲ್ಲೆಗಳು, ಅನ್ಯಾಯ, ಅಕ್ರಮವನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. ನಾವೆಲ್ಲಾ ದೇಶಪ್ರೇಮಿಗಳು ಒಂದಾಗಿ ಈ ಫ್ಯಾಸಿಸ್ಟ್ ಶಕ್ತಿಯನ್ನು ದಿಟ್ಟತನದಿಂದ ಎದುರಿಸಬೇಕಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು.
ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ 'ನಿರ್ಭೀತಿಯಿಂದ ಜೀವಿಸಿ ಘನತೆಯಿಂದ ಜೀವಿಸಿ' ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡುತ್ತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮೊಹಿದಿನ್ ಹಳೆಯಂಗಡಿ ವಹಿಸಿದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸೂರಲ್ಪಾಡಿ ಆಯಿಶಾ ಮಸ್ಜಿದ್ ಇಮಾಂ ಮೌಲಾನಾ ಇಸ್ಮಾಯಿಲ್ ಖಾಸಿಮಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ಫ್ರೆಂಡ್ಸ್ ಸರ್ಕಲ್ ಗುರುಪುರ ಕೈಕಂಭ ಇದರ ಅಧ್ಯಕ್ಷ ಇಮ್ತಿಯಾಝ್, ಕಂದಾವರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಮಾನ್, ಕಾಂಜಿಲಕೋಡಿ ಮಸೀದಿ ಅಧ್ಯಕ್ಷ ಎಮ್.ಎ ಅಹ್ಮದ್ ಬಾವ ಹಾಗು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಅಸ್ತಾರ್ ಅಡ್ಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










