ಆ.31ರಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಬೆಂಗಳೂರು, ಆ.30: ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಆ.31ರಂದು ಚುನಾವಣೆ ನಡೆಯಲಿದ್ದು, ತೀವ್ರ ಜಿದ್ದಾಜಿದ್ದಿನಿಂದ ಕೂಡಿರಲಿದೆ.
ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಬೆಳಗಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜೆಡಿಎಸ್‌ನ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವೆ ಪೈಪೋಟಿ ಆರಂಭವಾಗಿದೆ. ಆದರೆ, ನಾಳೆ ನಡೆಯಲಿರುವ ಚುನಾವಣೆಯಲ್ಲಿ ರೇವಣ್ಣ ಸ್ಪರ್ಧೆ ಇನ್ನೂ ಖಚಿತವಾಗಿಲ್ಲ.
ಬಾಲಚಂದ್ರ ಜಾರಕಿಹೊಳಿ ಪರ ಕೆಎಂಎಫ್‌ನ ಅಧಿಕ ನಿರ್ದೇಶಕರು ಬೆಂಬಲ ನೀಡಿದರೆ ರೇವಣ್ಣ ಸಹಜವಾಗಿ ಕಣದಿಂದ ಹಿಂದಕ್ಕೆ ಸರಿಯಲಿದ್ದಾರೆ. ರೇವಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿದ್ದರೆ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಈಗಾಗಲೇ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜಾರಕಿಹೊಳಿಗೆ ಬೆಂಬಲಿಸಿದ್ದಾರೆ. ಶತಾಯಗತಾಯ ಕೆಎಂಎಫ್‌ನಲ್ಲಿ ಅಧ್ಯಕ್ಷ ಸ್ಥಾನವನ್ನು ಪಡೆಯಲೇಬೇಕೆಂದು ಪಣತೊಟ್ಟಿರುವ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಬೆಂಬಲಿತ 10 ಕ್ಕೂ ಅಧಿಕ ನಿರ್ದೇಶಕರನ್ನು ಮುಂಬೈಗೆ ಕರೆದೊಯ್ದಿದ್ದಾರೆ.
ನಾಳೆ ನಡೆಯಲಿರುವ ಕೆಎಂಎಫ್ ಚುನಾವಣೆಯಲ್ಲಿ ಎಲ್ಲ ನಿರ್ದೇಶಕರು ಪಾಲ್ಗೊಳ್ಳಲಿದ್ದು, 16 ಮಂದಿ ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಅದರಲ್ಲಿ 12 ಮಂದಿ ವಿವಿಧ ಒಕ್ಕೂಟಗಳ ನಿರ್ದೇಶಕರು, ಒಬ್ಬರು ಸರಕಾರದ ನಾಮನಿರ್ದೇಶಕ ಸದಸ್ಯರು, ಇಬ್ಬರು ಅಧಿಕಾರಿಗಳಿದ್ದಾರೆ.
ಈಗಾಗಲೇ ಬಾಲಚಂದ್ರ ಜಾರಕಿಹೊಳಿಗೆ ಹತ್ತಕ್ಕೂ ಅಧಿಕ ನಿರ್ದೇಶಕರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರೇ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಖಚಿತ ಎನ್ನಲಾಗಿದ್ದು, ನಾಳೆ ಚುಾವಣೆಯ ನಂತರ ಘೋಷಣೆಯಾಗಲಿದೆ.







