ದೇಶಾದ್ಯಂತ ಜುಲೈ- ಆಗಸ್ಟ್‌ನಲ್ಲಿ ದಾಖಲೆ ಮಳೆ

ಹೊಸದಿಲ್ಲಿ, ಆ.31: ದೇಶಾದ್ಯಂತ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ದಾಖಲೆ ಮಳೆಯಾಗಿದ್ದು, 25 ವರ್ಷಗಳಲ್ಲೇ ಗರಿಷ್ಠ ಮಳೆ ಈ ಎರಡು ತಿಂಗಳಲ್ಲಿ ದಾಖಲಾಗಿದೆ. 1994ರ ಬಳಿಕ ಇದೇ ಮೊದಲ ಬಾರಿ ವ್ಯಾಪಕ ಮಳೆಯಾಗಿದ್ದು, ಈ ಎರಡು ತಿಂಗಳಲ್ಲಿ ವಾಡಿಕೆಗಿಂತ ಶೇಕಡ 10ರಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಆಗಸ್ಟ್ ತಿಂಗಳ ಮೊದಲ 30 ದಿನಗಳಲ್ಲಿ ವಾಡಿಕೆಗಿಂತ ಶೇಕಡ 16ರಷ್ಟು ಅಧಿಕ ಮಳೆಯಾಗಿದ್ದು, ಇದು 23 ವರ್ಷಗಳಲ್ಲೇ ಗರಿಷ್ಠ. ಜುಲೈನಲ್ಲಿ ಕೂಡಾ 5% ಅಧಿಕ ಮಳೆಯಾಗಿದೆ. ಎರಡೂ ತಿಂಗಳಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಸೇರಿಸಿದರೆ ಇದು 25 ವರ್ಷಗಳಲ್ಲೇ ಗರಿಷ್ಠ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ ತಿಂಗಳಲ್ಲಿ ಶೇಕಡ 33ರಷ್ಟು ಮಳೆ ಕೊರತೆಯಾಗಿದ್ದು, ಐದು ವರ್ಷಗಳಷ್ಟೇ ಕನಿಷ್ಠ ಮಳೆಯಾಗಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಪ್ರಾದೇಶಿಕ ಅಂಶಗಳು ಜುಲೈನಿಂದೀಚೆಗೆ ಮುಂಗಾರಿಗೆ ಅನುಕೂಲವಾಯಿತು. ಮೊದಲನೆಯದಾಗಿ ಭಾರತದ ಮುಂಗಾರು ದುರ್ಬಲಗೊಳಿಸುವ ಎಲ್‌ನಿನೊ ಜುಲೈನಲ್ಲಿ ಮರೆಯಾಗಿದ್ದರೆ, ಸಾಗರದ ಧ್ರುವೀಕರಣ ಕೂಡಾ ಭಾರತದ ಮುಂಗಾರಿಕೆ ಪೂರಕವಾಯಿತು" ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ವಿವರಿಸಿದ್ದಾರೆ.
ಪ್ರಾದೇಶಿಕವಾಗಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಇದು ಒಳನಾಡಿನತ್ತ ಚಲಿಸಿತು. ಇಡೀ ಆಗಸ್ಟ್‌ನಲ್ಲಿ ಈ ವಾತಾವರಣ ಇತ್ತು. ಇದು ಕೇಂದ್ರ ಭಾರತ ಹಾಗೂ ದಕ್ಷಿಣದಲ್ಲಿ ರಭಸದ ಮುಂಗಾರಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.