ಟ್ವಿಟರ್ ಸಿಇಒ ಖಾತೆಯೇ ಹ್ಯಾಕ್!
ಸ್ಯಾನ್‌ಫ್ರಾನ್ಸಿಸ್ಕೊ, ಆ.31: ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯಾಕ್ ಡೋರ್ಸೆ ಅವರ ಟ್ವಿಟರ್ ಖಾತೆಯೇ ಹ್ಯಾಕ್ ಆಗಿ ಹಲವು ಅಸಂಬದ್ಧ ಮತ್ತು ಆಕ್ರಮಣಕಾರಿ ಟ್ವೀಟ್‌ಗಳು ಆಗಿರುವುದು ಟ್ವಿಟರ್ ಬಳಕೆದಾರರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜನಾಂಗೀಯ ನಿಂದನೆ ಹಾಗೂ ಬಾಂಬ್‌ಗೆ ಸಲಹೆ ಮಾಡಿರುವ ಟ್ವೀಟ್‌ಗಳು @ಜ್ಯಾಕ್ ಖಾತೆಯಿಂದ ರಾತ್ರಿ 8 ಗಂಟೆಯ ಸುಮಾರಿಗೆ ಟ್ವೀಟ್ ಆಗಿವೆ. ಆ ಬಳಿಕ ಅವುಗಳನ್ನು ಡಿಲೀಟ್ ಮಾಡಲಾಗಿದೆ. ಕೆಲ ಟ್ವೀಟ್‌ಗಳು ಚಕ್ಲಿಂಗ್‌ಸ್ಕ್ವಾಡ್ ಎಂಬ ಹ್ಯಾಷ್‌ಟ್ಯಾಗ್ ಹೊಂದಿದ್ದು, ಇವು ಹ್ಯಾಕರ್ ಗುಂಪಿನ ಗುರುತಿನ ಸಂಕೇತ ಎನ್ನಲಾಗಿದೆ.
ಜನಾಂಗೀಯ ವಿಶೇಷಣಗಳ ಕೆಲ ಟ್ವೀಟ್‌ಗಳು ಜರ್ಮನಿಯ ನಾಝಿ ಗುಂಪುಗಳಿಂದ ಮರು ಟ್ವೀಟ್ ಆಗಿವೆ. ಜ್ಯಾಕ್ ಅವರ ಖಾತೆ ಹ್ಯಾಕ್ ಆಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.
ಟ್ವಿಟರ್ ಸಹ ಸಂಸ್ಥಾಪಕರೇ ತಮ್ಮ ಖಾತೆಯನ್ನು ಎರಡು ಅಂಶಗಳ ದೃಢೀಕರಣದಿಂದ ಏಕೆ ಸುರಕ್ಷಿತವಾಗಿ ಇಟ್ಟುಕೊಂಡಿಲ್ಲ ಎಂಬ ಪ್ರಶ್ನೆಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ತನ್ನ ಮುಖ್ಯಸ್ಥರ ಖಾತೆಯನ್ನೇ ಸುರಕ್ಷಿತವಾಗಿಟ್ಟುಕೊಳ್ಳದ ಸಂಸ್ಥೆ ಸಾರ್ವಜನಿಕರ ಖಾತೆಯನ್ನು ಹೇಗೆ ಕಾಪಾಡುತ್ತದೆ ಎಂಬ ಪ್ರಶ್ನೆಗಳೂ ಕೇಳಿಬಂದಿವೆ. "ಯೂ ಕಾಂಟ್ ಪ್ರೊಟೆಕ್ಟ್ ಜ್ಯಾಕ್, ಯೂ ಕಾಂಟ್ ಪ್ರೊಟೆಕ್ಟ್...ಜ್ಯಾಕ್" ಎಂದು ಟ್ವಿಟರ್ ಬಳಕೆದಾರರೊಬ್ಬರು ಚಾಟಿ ಬೀಸಿದ್ದಾರೆ.