ಕೇಂದ್ರ ಸಚಿವ ಪೊಖ್ರಿಯಾಲ್ ಗೆ ಹಲವು ವಿವಿಗಳಿಂದ ಗೌರವ ಡಾಕ್ಟರೇಟ್ ದೊರಕಿದೆ ಎಂದ ಕಚೇರಿ
“ಡಿಗ್ರಿ ನಕಲಿ ಎಂಬ ಆರೋಪದ ಹಿಂದೆ ದುರುದ್ದೇಶವಿದೆ”

ಹೊಸದಿಲ್ಲಿ, ಆ.31: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರ ಶೈಕ್ಷಣಿಕ ಡಿಗ್ರಿಗಳು ನಕಲಿ ಎಂಬ ಆರೋಪವನ್ನು ದುರುದ್ದೇಶದಿಂದ ಮಾಡಲಾಗಿದೆ ಹಾಗೂ ಸಚಿವರಿಗೆ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರಕಿವೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ.
ಹಿಮಾಚಲ ಪ್ರದೇಶದ ಬಂಡಾಯ ಬಿಜೆಪಿ ನಾಯಕ ಮನೋಜ್ ವರ್ಮಾ ಆಗಸ್ಟ್ 27ರಂದು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಗೆ ಅಪೀಲು ಸಲ್ಲಿಸಿ ಡಾ. ರಮೇಶ್ ಪೊಖ್ರಿಯಾಲ್ ನಿಶಾಂಕ್ ಎಂಬ ಹೆಸರಿನೊಂದಿಗೆ ಶ್ರೀಲಂಕಾದ ಓಪನ್ ಇಂಟರ್‍ನ್ಯಾಷನಲ್ ವಿವಿಯಿಂದ ದೊರೆತ `ನಕಲಿ' ಡಾಕ್ಟರೇಟ್ ಪದವಿಯ ಆಧಾರದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದರಿಂದ ಪೋಖ್ರಿಯಾಲ್ ಪ್ರಮಾಣವಚನ ಸ್ವೀಕಾರವನ್ನು ರದ್ದುಗೊಳಿಸಬೇಕೆಂದು ಕೋರಿದ್ದರು.
ಈ ದೂರಿಗೆ ಸಚಿವಾಲಯ ಮೇಲಿನಂತೆ ಸ್ಪಂದಿಸಿದರೂ ಸಚಿವರ ಕಚೇರಿ ಮೂಲವೊಂದು ಸಚಿವರಿಗೆ ಡಾಕ್ಟರೇಟ್ ನೀಡಿದ ಶ್ರೀಲಂಕಾದ ಓಪನ್ ಇಂಟರ್‍ನ್ಯಾಷನಲ್ ಯುನಿವರ್ಸಿಟಿಯನ್ನು ಭಾರತ ಮಾನ್ಯ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಿದೆ.
ಲೋಕಸಭಾ ಚುನಾವಣೆಯಲ್ಲಿ ಪೊಖ್ರಿಯಾಲ್ ವಿರುದ್ಧ ಸ್ಪರ್ಧಿಸಿದ್ದ ವರ್ಮ ತಮ್ಮ ಅಪೀಲಿನಲ್ಲಿ ಸಚಿವರ ಡಾಕ್ಟರೇಟ್ ಪದವಿ ಮಾತ್ರವಲ್ಲದೆ ಅವರ ಎಂಎ ಪದವಿಯನ್ನೂ ಪ್ರಶ್ನಿಸಿದ್ದರು. ಸಚಿವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದಂತೆ ಅವರು ತಮ್ಮ ಸ್ನಾತ್ತಕೋತ್ತರ ಪದವಿಯನ್ನು ಉತ್ತರಾಖಂಡದ ಘರ್ವಾಲ್ ಎಂಬಲ್ಲಿರುವ ಹೇಮವತಿ ನಂದನ್ ಬಹುಗುಣ ವಿವಿಯಿಂದ ಪಡೆದಿದ್ದರೂ, ಅವರು ಪದವಿ ಪ್ರಮಾಣಪತ್ರವನ್ನು ಕೇಂದ್ರ ಮಾಹಿತಿ ಆಯೋಗದ ಸೂಚನೆಯಂತೆ ಹಾಜರು ಪಡಿಸಿಲ್ಲ.
ಆದರೆ ಸಚಿವರ ಕಾರ್ಯಾಲಯ ಇದೀಗ ನೀಡಿದ ಮಾಹಿತಿಯಂತೆ ಸಚಿವರಿಗೆ ಗ್ರಾಫಿಕ್ ಎರಾ ಯುನಿವರ್ಸಿಟಿ (ಡೀಮ್ಡ್-ಟು-ಬಿ ವಿವಿ)ಯಿಂದ ಹಾಗೂ ಉತ್ತರಾಖಂಡ ಸಂಸ್ಕೃತ ವಿವಿಯಿಂದ ಗೌರವ ಡಾಕ್ಟರೇಟ್ ದೊರಕಿದೆ. ಸಚಿವರು 60ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಅರ್ಧ ಡಜನಿಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಪುಸ್ತಕಗಳ ಆಧರಿತ ಸಂಶೋಧನೆಗಾಗಿ ಪಿಎಚ್ ಡಿ ದೊರಕಿತ್ತು ಎಂದೂ ಹೇಳಿದೆ.







