ಮಂಗಳೂರು: ಭತ್ತ ಬೆಳೆ ನೇಜಿ ನೆಟ್ಟು ಸಂಭ್ರಮಿಸಿದ ವಿಶೇಷ ವಿದ್ಯಾರ್ಥಿಗಳು

ಮಂಗಳೂರು, ಆ.31: ನಗರದ ಹೊರವಲಯ ಗುರುಪುರ ಕುಕ್ಕುದಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ವಾಮಂಜೂರು ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲಾ ವಿದ್ಯಾರ್ಥಿಗಳು ‘ಎಣೆಲ್’ ಭತ್ತದ ಬೆಳೆಯ ನೇಜಿ ನೆಟ್ಟು ಸಂಭ್ರಮಿಸಿದರು.
ಸತೀಶ್ ಕಾವರ ಭತ್ತದ ಗದ್ದೆಯಲ್ಲಿ ನಡೆದ ನೇಜಿ ನಾಟಿಯಲ್ಲಿ ಶಾಲೆಯ 8, 9 ಮತ್ತು 10ನೇ ತರಗತಿಯ ವಿಶೇಷ ಸಾಮರ್ಥ್ಯದ ಮಕ್ಕಳ ಸಹಿತ ಸುಮಾರು 80-85 ವಿದ್ಯಾರ್ಥಿಗಳು ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ನೇಜಿ ನೆಟ್ಟರು. ಈ ವೇಳೆ ಗದ್ದೆ ಕೆಲಸದ ಹೆಂಗಸರು ಮಕ್ಕಳಿಗೆ ನೇಜಿ ನೆಡುವ ವಿಧಾನ ಕಲಿಸಿ ಕೊಟ್ಟರು ಮತ್ತು ಅವರ ಪಾಡ್ದನಕ್ಕೆ ಮಕ್ಕಳು ಧ್ವನಿಗೂಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ರಮೇಶ ಆಚಾರ್, ದೈಹಿಕ ಹಾಗೂ ಯೋಗ ಶಿಕ್ಷಕ ಶೇಖರ ಕಡ್ತಲ, ವಿಜ್ಞಾನ ಶಿಕ್ಷಕ ಗಂಗಾಧರ ಕೂಡ ನೇಜಿ ನೆಟ್ಟರು. ಇವರೊಂದಿಗೆ ಶಿಕ್ಷಕಿಯರಾದ ಜ್ಯೋತಿ ಮತ್ತು ಚಂದ್ರಕಲಾ ಇದ್ದರು. ಅಂಗಡಿ ಮಾಲಕ ಶೇಖರ ಪೂಜಾರಿ ಕಾಮ ಸಹಕರಿಸಿದರು.
ಭತ್ತದ ಬೇಸಾಯದ ಬಗ್ಗೆ ಮಕ್ಕಳಿಗೆ ವೈಯಕ್ತಿಕ ಅನುಭವ ಗಳಿಸಲು ಶಾಲೆಯಿಂದ ಈ ರೀತಿ ಪ್ರಯತ್ನಿಸಲಾಗುತ್ತಿದೆ. ಕಳೆದ ವರ್ಷ ನಮ್ಮ ಮಕ್ಕಳು ಉಳಾಯಿಬೆಟ್ಟು ಶಾಲೆಯ ಹತ್ತಿರ ನೇಜಿನಾಟಿ ಮಾಡಿದ್ದರು. ಅಕ್ಕಿ ಹೇಗಾಗುತ್ತದೆ ಎಂಬುದೇ ಗೊತ್ತಿಲ್ಲದ ಇಂದಿನ ಮಕ್ಕಳಿಗೆ ಆ ಬಗ್ಗೆ ತಿಳಿಸುವ ಅಗತ್ಯವಿದೆ.
- ಶೇಖರ ಕಡ್ತಲ, ದೈಹಿಕ ಶಿಕ್ಷಕ
ವಾಮಂಜೂರು ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲೆ






.jpg)
.jpg)

