ದೇಶದ ಅರ್ಥ ವ್ಯವಸ್ಥೆ ಹದಗೆಡಲು ಮೋದಿ ಕಾರಣ: ಸಿದ್ದರಾಮಯ್ಯ
"ಡಾ.ಮನಮೋಹನ್ ಸಿಂಗ್ ಸರಕಾರ ಇದ್ದಾಗ ಜಿಡಿಪಿ ದರ ಶೇ.8-9ರಷ್ಟು ಇತ್ತು"

ಬೆಂಗಳೂರು, ಆ.31: ಡಾ.ಮನಮೋಹನ್ ಸಿಂಗ್ ಸರಕಾರ ಇದ್ದಾಗ ಜಿಡಿಪಿ ದರ ಶೇ.8-9ರಷ್ಟು ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ನರೇಂದ್ರ ಮೋದಿಯವರ ದೂರದೃಷ್ಟಿಯಿಲ್ಲದ ಆರ್ಥಿಕ ನೀತಿಗಳೇ ದೇಶದ ಅರ್ಥ ವ್ಯವಸ್ಥೆ ಹದಗೆಡಲು ನೇರ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ಅಧೋಗತಿಗೆ ತಲುಪಿದೆ. ಜಿಡಿಪಿ ಬೆಳವಣಿಗೆ ದರ ಶೇ.5ರಷ್ಟು ಇದೆ ಎಂದು ಕೇಂದ್ರ ಸರಕಾರ ಹೇಳಿದೆ. ಜೊತೆಗೆ ಕಳೆದ ಆರು ವರ್ಷದಲ್ಲಿ ಇದೇ ಕನಿಷ್ಠ ಎಂದೂ ಅವರೇ ಹೇಳಿದ್ದಾರೆ. ನನಗೆ ಗೊತ್ತಿರುವ ಹಾಗೆ ಸದ್ಯದ ಜಿಡಿಪಿ ಶೇ.5ರಷ್ಟು ಇಲ್ಲ, ಶೇ.3.7 ಇಲ್ಲವೇ ಶೇ.4 ಇದೆ. ಆದರೆ, ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ನಂಬಿಸಲು ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
27 ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿತ್ತು. ಬ್ಯಾಂಕ್‌ಗಳ ವಿಲೀನದಿಂದಲೇ ಬ್ಯಾಂಕಿಂಗ್ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ. ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್‌ಗಳ ಮೇಲೆ ಕೇಂದ್ರದ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.





