ಅಕ್ರಮ ಪಡಿತರ ಚೀಟಿಗಳನ್ನು ಹಿಂದುರಿಗಿಸಲು ರಾಜ್ಯ ಸರಕಾರ ಸೂಚನೆ!
ತಪ್ಪಿದರೆ ದಂಡ, ಕ್ರಿಮಿನಲ್ ಮೊಕದ್ದಮೆ ದಾಖಲು

ಬೆಂಗಳೂರು, ಆ.31: ಪಡಿತರ ಮೇಲಿನ ವೆಚ್ಚ ತಗ್ಗಿಸಲು ಹಾಗೂ ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ಸಲುವಾಗಿ ಪಡಿತರ ಚೀಟಿಗಳ ಸಂಖ್ಯೆ ಕಡಿಮೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ.
ಅಕ್ರಮ ಪಡಿತರ ಚೀಟಿಗಳನ್ನು ಹೊಂದಿರುವವರು ಕೂಡಲೇ ವಾಪಸ್ಸು ಮಾಡಿ, ಇಲ್ಲದಿದ್ದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕು ಎಂದು ಜಿಲ್ಲಾಡಳಿತಗಳ ಮೂಲಕ ಜನರಿಗೆ ಸಂದೇಶ ರವಾನೆ ಮಾಡಲಾಗುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಸೂಚನೆಗಳನ್ನು ನೀಡಲಾಗಿದೆ. ಕೆಲ ತಾಲೂಕುಗಳಲ್ಲಿ ಅನರ್ಹ ಕಾರ್ಡ್‌ಗಳನ್ನು ವಾಪಸ್ಸು ಪಡೆಯಲು ನಿಗದಿತ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಯಾವುದೇ ಗಡುವು ನೀಡಿಲ್ಲ.
ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಅನ್ನು ಈ ಹಿಂದೆ ಪಡಿತರ ಚೀಟಿಯ ನೈಜತೆ ಪರಿಶೀಲಿಸಲು ಲಿಂಕ್ ಮಾಡಿದ ಸಂದರ್ಭದಲ್ಲಿ ಹಲವು ಕಾರ್ಡ್‌ಗಳು ರದ್ದುಗೊಂಡಿವೆ. ಇದರಿಂದ ಸಾಕಷ್ಟು ಆಹಾರ ಪದಾರ್ಥಗಳು ಉಳಿತಾಯವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ರದ್ದು ಹೇಗಿರಲಿದೆ: ಕಾರ್ಡ್‌ಗಳನ್ನು ರದ್ದು ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊಬೈಲ್ ಹಾಗೂ ಆಧಾರ್ ಲಿಂಕ್ ಮಾಡಿದ್ದನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ 1000-1500 ಸರಕಾರಿ, ಅರೆ ಸರಕಾರಿ ನೌಕರರು ಬಿಪಿಎಲ್ ಪಡೆದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ನೋಂದಣಿಗೆ ನೀಡಿದ ಮೊಬೈಲ್ ಸಂಖ್ಯೆ ಹಾಗೂ ಪಡಿತರ ಚೀಟಿಗೆ ಕೊಟ್ಟ ಸಂಖ್ಯೆಯನ್ನು ಲಿಂಕ್ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ 1000 ಕ್ಕೂ ಅಧಿಕ ಅಕ್ರಮ ಪಡಿತರ ಚೀಟಿಗಳು ಪತ್ತೆಯಾಗಿವೆ. ಆದಾಯ ಪ್ರಮಾಣಪತ್ರ, ತೆರಿಗೆ ಪಾವತಿಯ ಮಾಹಿತಿಯ ಆಧಾರದಲ್ಲಿ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ಪಡೆಯಲಾಗಿದೆ.
ಯಾರೆಲ್ಲಾ ಅನರ್ಹರು..?: ಸರಕಾರಿ, ಅರೆ ಸರಕಾರಿ ನೌಕರರು, ತೆರಿಗೆ ಪಾವತಿದಾರರು, ಹೆಚ್ಚಿನ ಜಮೀನು ಹೊಂದಿರುವವರು, ಜೀವನೋಪಾಯಕ್ಕಲ್ಲದೆ ಬೇರೆ ಉದ್ದೇಶಕ್ಕೆ ನಾಲ್ಕು ಚಕ್ರದ ವಾಹನ ಹೊಂದಿರುವವರು ಪಡಿತರ ಚೀಟಿಗಳನ್ನು ಪಡೆದು ವಂಚಿಸುತ್ತಿದ್ದಾರೆ. ಇದರಿಂದ ಬಡವರಿಗೆ ಸಿಗಬೇಕಾದ ಪಾಲು ಕಾಳಸಂತೆಯಲ್ಲಿ ಪೋಲಾಗುತ್ತಿದೆ. ಅದಕ್ಕೆ ಬ್ರೇಕ್ ಹಾಕಲು ಸರಕಾರ ಮುಂದಾಗಿದೆ.
ಯಾರೆಲ್ಲಾ ಅರ್ಹರು..?: ಸರಕಾರಿ, ಅರೆ ಸರಕಾರಿ, ಅನುದಾನಿತ ಸಂಸ್ಥೆಗಳ ನೌಕರರಾಗಿರಬಾರದು. ತೆರಿಗೆ ಪಾವತಿಸುತ್ತಿರಬಾರದು. 3 ಹೆಕ್ಟೇರ್ ಒಣಭೂಮಿ, ನೀರಾವರಿ ಭೂಮಿ, 1 ಸಾವಿರ ಚದರ ಅಡಿಯ ಪಕ್ಕಾ ಮನೆಯಿರಬಾರದು. ಜೀವನೋಪಾಯಕ್ಕಾಗಿ ಟ್ರಾಕ್ಟರ್, ಟ್ಯಾಕ್ಸಿ ಹೊಂದಿರುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಇರಬಾರದು. ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಅಧಿಕವಿರಬಾರದು.
ಶಿಕ್ಷೆ ಏನು..?: ಅಕ್ರಮ ಪಡಿತರ ಚೀಟಿಗಳನ್ನು ಹೊಂದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜತೆಗೆ ಈವರೆಗೆ ಪಡೆದಿರುವ ಅಕ್ಕಿಗೆ ಪ್ರತಿ ಕೆಜಿಗೆ 35 ರೂ.ಗಳಂತೆ ವಸೂಲಿ ಮಾಡಲಾಗುತ್ತದೆ.







