ಹಿ.ಪ್ರ: ಬಲವಂತದ ಮತಾಂತರಗಳನ್ನು ನಿಷೇಧಿಸುವ ಮಸೂದೆ ಅಂಗೀಕಾರ

ಶಿಮ್ಲಾ,ಆ.31: ಬಲವಂತದ ಮತಾಂತರಗಳನ್ನು ನಿಷೇಧಿಸುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆಯು ಶನಿವಾರ ಅಂಗೀಕರಿಸಿದೆ. ಬಿಜೆಪಿ ಸರಕಾರವು ಗುರುವಾರ ಮಸೂದೆಯನ್ನು ಸದನದಲ್ಲಿ ಮಂಡಿಸಿತ್ತು.
ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ ಮಸೂದೆ,2019 ತಪ್ಪು ಮಾಹಿತಿ,ಬಲವಂತ,ಅನಗತ್ಯ ಪ್ರಭಾವ,ಪ್ರಚೋದನೆ ಮತ್ತು ಯಾವುದೇ ವಂಚನೆಯ ಮೂಲಕ ಮತಾಂತರಿಸುವುದನ್ನು ನಿಷೇಧಿಸುತ್ತದೆ. ಮದುವೆಯ ಏಕೈಕ ಉದ್ದೇಶದ ಮತಾಂತರಗಳನ್ನೂ ಅದು ನಿಷೇಧಿಸುತ್ತದೆ. 2006ರಲ್ಲಿ ಇದೇ ಹೆಸರಿನಲ್ಲಿ ಜಾರಿಗೊಂಡಿದ್ದ ಕಾಯ್ದೆಯನ್ನೂ ಮಸೂದೆಯು ರದ್ದುಗೊಳಿಸುತ್ತದೆ.
ಇತರ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವ ವ್ಯಕ್ತಿಯು ದಂಡಾಧಿಕಾರಿಗಳಿಗೆ ಒಂದು ತಿಂಗಳ ನೋಟಿಸ್ ನೀಡುವುದನ್ನು ಮಸೂದೆಯು ಕಡ್ಡಾಯಗೊಳಿಸಿದೆ. ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕಾದ ಘೋಷಣೆಯು ವ್ಯಕ್ತಿಯು ತನ್ನ ಸ್ವಂತ ಇಚ್ಛೆಯಿಂದ ಮತಾಂತರಗೊಳ್ಳುವುದನ್ನು ದೃಢಪಡಿಸುತ್ತದೆ. ಮತಾಂತರ ಕಾರ್ಯಕ್ರಮವನ್ನು ನೆರವೇರಿಸುವ ಗುರು ಅಥವಾ ಪುರೋಹಿತರೂ ಒಂದು ತಿಂಗಳ ನೋಟಿಸ್ ನೀಡಬೇಕಾಗುತ್ತದೆ. ಆದರೆ ತಮ್ಮ ಮಾತೃಧರ್ಮಕ್ಕೆ ಮರಳಲು ಬಯಸುವವರಿಗೆ ಮಸೂದೆಯ ನಿಯಮಗಳಿಂದ ವಿನಾಯಿತಿಯನ್ನು ನೀಡಲಾಗಿದೆ.
ಮಸೂದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸುವವರು ಏಳು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಮಸೂದೆಗೆ ರಾಜ್ಯಪಾಲ ಕಾಲರಾಜ್ ಮಿಶ್ರಾ ಅವರು ಒಪ್ಪಿಗೆ ನೀಡಿದ ಬಳಿಕ ಅದು ಕಾಯ್ದೆಯಾಗಲಿದೆ.







