ಎನ್‌ಆರ್‌ಸಿ ಅಂತಿಮ ಪಟ್ಟಿ: ಅಸೊಮ್ ಗಣ ಪರಿಷದ್ ಅಸಮಾಧಾನ

ಗುವಹಾಟಿ,ಆ.31: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಸ್ಸಾಂನ ಸರಕಾರದ ಮಿತ್ರ ಪಕ್ಷ ಅಸೊಮ್ ಗಣ ಪರಿಷದ್ (ಎಜಿಪಿ) ಶನಿವಾರ ಅಸಾಮಾಧಾನ ವ್ಯಕ್ತಪಡಿಸಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪಟ್ಟಿಯ ಮರುಪರಿಶೀಲನೆಗೆ ಅವಕಾಶವಿದೆ ಎಂದು ತಿಳಿಸಿದೆ.
ಈ ಪಟ್ಟಿಯಲ್ಲಿ ಹೊರಗಿಡಲಾಗಿರುವ ಜನರ ಸಂಖ್ಯೆ ಬಹಳಷ್ಟು ಸಣ್ಣದು ಎಂದು ತೋರುತ್ತದೆ ಎಂದು ಎಜಿಪಿ ಅಧ್ಯಕ್ಷ ಮತ್ತು ಕೃಷಿ ಸಚಿವ ಅತುಲ್ ಬೊರ ತಿಳಿಸಿದ್ದಾರೆ. ಅಸ್ಸಾಂ ನಾಗರಿಕರನ್ನು ಪ್ರಮಾಣೀಕರಿಸುವ ಎನ್‌ಆರ್‌ಸಿಯನ್ನು ಅಸ್ಸಾಂ ಒಪ್ಪಂದದ ಪತ್ತೆಮಾಡುವಿಕೆ, ಅಳಿಸುವಿಕೆ ಮತ್ತು ವಿದೇಶಿಗರ ಗಡಿಪಾರು ನಿಬಂಧನೆಯ ಆಧಾರದಲ್ಲಿ ಉನ್ನತೀಕರಣಗೊಳಿಸಲಾಗಿದೆ. ಆದರೆ ಅತ್ಯಂತ ಕಡಿಮೆ ಅಕ್ರಮ ವಲಸಿಗರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪಟ್ಟಿಯಿಂದ ಹೊರಗಿಡಲಾಗಿರುವ ಅಕ್ರಮ ವಲಸಿಗರ ಸಂಖ್ಯೆಯಿಂದ ಎಜಿಪಿ ಸಮಾಧಾನಗೊಂಡಿಲ್ಲ. ಅಂತಿಮ ಪಟ್ಟಿಯಲ್ಲಿ 19,06,657 ಮಂದಿಯನ್ನು ಹೊರಗಿಟ್ಟಿರುವುದು ಅತ್ಯಂತ ಕಡಿಮೆಯಾಗಿದ್ದು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಇದನ್ನು ಮರುಪರಿಶೀಲಿಸುವ ಅವಕಾಶವಿದೆ ಎಂದು ಬೊರ ತಿಳಿಸಿದ್ದಾರೆ.





