ಲೋಪಯುಕ್ತ ಎನ್‌ಆರ್‌ಸಿ: ಅತೃಪ್ತಿ ವ್ಯಕ್ತಪಡಿಸಿದ ನೈಜ ಮನವಿದಾರ

ಗುವಹಾಟಿ,ಆ.31: ರಾಜ್ಯದ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಉನ್ನತೀಕರಣಗೊಳಿಸುವಂತೆ ಆರು ವರ್ಷಗಳ ಹಿಂದೆ ಪ್ರಥಮವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ ಸರಕಾರೇತರ ಸಂಸ್ಥೆ ಅಸ್ಸಾಂ ಸಾರ್ವಜನಿಕ ಕಾರ್ಯ (ಎಪಿಡಬ್ಲೂ), ಕರಡು ಪಟ್ಟಿಯ ಮರುಪರಿಶೀಲನೆ ನಡೆಸಬೇಕೆಂಬ ತನ್ನ ಮನವಿಯನ್ನು ಶ್ರೇಷ್ಟ ನ್ಯಾಯಾಲಯ ತಳ್ಳಿ ಹಾಕಿರುವ ಕಾರಣ ಸದ್ಯ ಬಿಡುಗಡೆ ಮಾಡಲಾಗಿರುವ ಎನ್‌ಆರ್‌ಸಿಯ ಅಂತಿಮ ಪಟ್ಟಿ ಒಂದು ಲೋಪಯುಕ್ತ ದಾಖಲೆಯಾಗಿದೆ ಎಂದು ತಿಳಿಸಿದೆ.
ಈ ಉನ್ನತೀಕರಣ ಪ್ರಕ್ರಿಯೆ ನಡೆಸಲು ಬಳಸಲಾಗಿರುವ ಸಾಫ್ಟ್‌ವೇರ್ ಅಷ್ಟೊಂದು ದತ್ತಾಂಶವನ್ನು ನಿಭಾಯಿಸಲು ಸಮರ್ಥವಾಗಿದೆಯೇ ಮತ್ತು ಈ ದತ್ತಾಂಶವನ್ನು ಯಾವುದೇ ಮೂರನೇ ಮಾಹಿತಿ ತಂತ್ರಜ್ಞಾನ ತಜ್ಞರು ಪರಿಶೀಲಿಸಿದ್ದಾರೆಯೇ ಎಂಬ ಅನುಮಾನವೂ ನಮ್ಮ ಸಂಸ್ಥೆಗಿದೆ ಎಂದು ಎಪಿಡಬ್ಲೂ ಅಧ್ಯಕ್ಷ ಅಭಿಜೀತ್ ಶರ್ಮಾ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಅಕ್ರಮ ವಲಸೆಯ ಸಮಸ್ಯೆಯನ್ನು ಬಗೆಹರಿಸಲು ಎಂದೂ ಸಾಧ್ಯವಿಲ್ಲ ಎನ್ನುವುದನ್ನು ಎನ್‌ಆರ್‌ಸಿಯ ಅಂತಿಮ ಪಟ್ಟಿ ಸಾಬೀತು ಮಾಡಿದೆ. ಅದನ್ನು ಲೋಪರಹಿತವಾಗಿ ಮುಗಿಸಿದ್ದರೆ ಅದು ಅಸ್ಸಾಂನ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿರುತ್ತಿತ್ತು ಎಂದು ಶರ್ಮಾ ಅಭಿಪ್ರಾಯಿಸಿದ್ದಾರೆ.





