ಸುನಂದಾ ಪುಷ್ಕರ್ ಸಾವು: ತರೂರ್ ವಿರುದ್ಧ ಕ್ರಮ ಜರುಗಿಸಲು ಪೊಲೀಸರ ಮನವಿ

ಹೊಸದಿಲ್ಲಿ,ಆ.31: 2014ರಲ್ಲಿ ನಡೆದ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಆಕೆಯ ಪತಿ, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯಡಿ ಕ್ರಮ ಜರುಗಿಸುವಂತೆ ದಿಲ್ಲಿ ಪೊಲೀಸರು ನಗರ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತರೂರ್ ವಿರುದ್ಧ ಭಾರತೀಯ ದಂಡಸಂಹಿತೆಯ ವಿಧಿ 498-ಎ (ಮಹಿಳೆಯ ಮೇಲೆ ಆಕೆಯ ಪತಿ ಅಥವಾ ಆತನ ಸಂಬಂಧಿಕರಿಂದ ದೌರ್ಜನ್ಯ), 306ನೇ ವಿಧಿ (ಆತ್ಮಹತ್ಯೆಗೆ ಪ್ರಚೋದನೆ) ಅಥವಾ 302 (ಹತ್ಯೆ)ನೇ ವಿಧಿಯಡಿ ದೂರು ದಾಖಲಿಸುವಂತೆ ವಿಶೇಷ ನ್ಯಾಯಾಧೀಶಜಯ್ ಕುಮಾರ್ ಕುಹರ್ ಅವರಲ್ಲಿ ತನಿಖಾ ಸಂಸ್ಥೆ ಮನವಿ ಮಾಡಿದೆ.
ಪ್ರಕರಣದಲ್ಲಿ ದೂರಗಳನ್ನು ದಾಖಲಿಸಲು ವಾದಿಸುತ್ತಿದ್ದ ಸಂದರ್ಭದಲ್ಲಿ ಹಿರಿಯ ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಅವರು ಈ ಮನವಿ ಮಾಡಿದ್ದಾರೆ. ಸದ್ಯ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಮಾಜಿ ಕೇಂದ್ರ ಸಚಿವನ ವಿರುದ್ಧ ದಿಲ್ಲಿ ಪೊಲೀಸರು ಐಪಿಸಿಯ ವಿಧಿ 498-ಎ ಮತ್ತು 306ನೇ ವಿಧಿಯಡಿ ದೂರು ದಾಖಲಿಸಿದ್ದಾರೆ. ದಂಪತಿಯ ಮನೆಗೆಲಸದಾಕೆಯ ಹೇಳಿಕೆಯನ್ನು ಜೋರಾಗಿ ಓದಿದ ವಕೀಲ, ಕೇಟಿ ಎಂಬ ಮಹಿಳೆ ಮತ್ತು ಕೆಲವು ಮೊಬೈಲ್ ಸಂದೇಶಗಳ ಕಾರಣ ದಂಪತಿಯ ನಡುವೆ ಜಗಳ ನಡೆದಿತ್ತು ಎಂದು ತಿಳಿಸಿದ್ದಾರೆ. ಸಾವಿಗೂ ಮುನ್ನ ಪುಷ್ಕರ್ ಐಪಿಎಲ್ ವಿಷಯದ ಬಗ್ಗೆ ಸುದ್ದಿಗೋಷ್ಟಿ ನಡೆಸಲು ಬಯಸಿದ್ದರು ಮತ್ತು ನಾನು ಆತನನ್ನು (ತರೂರ್) ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದರು ಎಂದು ಸಾರ್ವಜನಿಕ ಅಭಿಯೋಜಕ ತಿಳಿಸಿದ್ದಾರೆ.







