ಅಮಿತ್ ಶಾ ತಿಳುವಳಿಕೆ ಬಗ್ಗೆ ಪ್ರಶ್ನಿಸುವ ಸ್ಥಿತಿಯಲ್ಲಿ ನಾವಿಲ್ಲ: ಸಚಿವ ಮಾಧುಸ್ವಾಮಿ
ಮೂರು ಮಂದಿಗೆ ಡಿಸಿಎಂ

ಮಂಡ್ಯ, ಆ.31: ನಾವು ಅಮಿತ್ ಶಾ ಅವರ ತಿಳುವಳಿಕೆ ಬಗ್ಗೆ ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ. ಅವರ ತೀರ್ಮಾನ ಪಕ್ಷಕ್ಕೆ ಒಳ್ಳೆಯಾದಾಗುತ್ತದೆಂದು ತಿಳಿದುಕೊಂಡಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಮೂರು ಮಂದಿ ಡಿಸಿಎಂ ಹುದ್ದೆ ಸೃಷ್ಠಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ಮಂದಿ ಡಿಸಿಎಂ ಬಗ್ಗೆ ಸಂಸದ ಶ್ರೀನಿವಾಸ್ ಪ್ರಸಾದ್ ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಒಬ್ಬೊಬ್ಬರ ಅಭಿಪ್ರಾಯಗಳು ಒಂದು ರೀತಿ ಇರುತ್ತವೆ. ಮೇಲೆ (ಕೇಂದ್ರದಲ್ಲಿ) ಇರುವವರು ತೀರ್ಮಾನ ತೆಗೆದುಕೊಂಡಾಗ ಅವರಿಗೆ ನಮಗಿಂತ ಹೆಚ್ಚು ತಿಳೀವಳಿಕೆ ಇದೆ ಎಂದು ಭಾವಿಸುತ್ತೇನೆ ಎಂದರು.
ಪಂಚಾಯತ್ ಸದಸ್ಯ ಆದಾಗ ಪಂಚಾಯತ್ ಅಧ್ಯಕ್ಷ ಆಗಬೇಕು ಎಂದು ಕನಸು ಕಾಣುತ್ತೇವೆ. ಹಾಗೆಯೇ ಶಾಸಕ ಆದಾಗ ಮಂತ್ರಿ ಆಗಬೇಕೆಂಬ ಕನಸು ಸಹಜ. ಹಾಗಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲವರಿಗೆ ಅಸಮಾಧಾನ ಆಗುವುದು ಸಹಜ ಎಂದು ಅವರು ಸ್ಪಷ್ಟಪಡಿಸಿದರು.
ನೆರೆ ಹಾವಳಿಯಿಂದ ಸುಮಾರು 32 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಸಮೀಕ್ಷೆ ಮಾಡಿದ್ದೇವೆ. ಸೆ.7ರಂದು ಪ್ರಧಾನಮಂತ್ರಿ ಮೋದಿ ಬೆಂಗಳೂರಿಗೆ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಸದ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ಮಾಡಬೇಕಾದ ಕೆಲಸ ಮಾಡಿದೆ ಎಂದು ಅವರು ಹೇಳಿದರು.
ಮಂಡ್ಯ ಜೆಡಿಎಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿ ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸ್ನೇಹಿತರು ಅಷ್ಟೇ ಎಂದರು.







