ದರೋಡೆಗೆ ಸಂಚು ರೂಪಿಸಿದ ಪ್ರಕರಣ: ಸ್ಯಾಮ್‌ಪೀಟರ್ ವಶಕ್ಕೆ ನೀಡಲು ಮಹಾರಾಷ್ಟ್ರ ಪೊಲೀಸರಿಂದ ಅರ್ಜಿ

ಮಂಗಳೂರು, ಆ.31: ಕೇಂದ್ರ ಸರಕಾರದ ತನಿಖಾ ಸಂಸ್ಥೆ ಹೆಸರು ಬಳಸಿ ದರೋಡೆಗೆ ಸಂಚು ರೂಪಿಸಿದ ರೂವಾರಿ ಟಿ. ಸ್ಯಾಮ್ ಪೀಟರ್(53)ನನ್ನು ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಮತ್ತು ಮಹಾರಾಷ್ಟ್ರ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ದೇಶದ ವಿವಿಧೆಡೆ ಸ್ಯಾಮ್ ಪೀಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈತನನ್ನು ‘ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಎಂದು ಘೋಷಿಸಿ ಈತನ ಬಂಧನಕ್ಕೆ ಸಿಸಿಬಿ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತನಿಗಾಗಿ ಹಲವು ಸಮಯದಿಂದ ಶೋಧ ಕಾರ್ಯ ಕೂಡ ನಡೆಸಿತ್ತು. ಪೀಟರ್ ಆ.16ರಂದು ಪಂಪ್‌ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾಗ ನಗರ ಪೊಲೀಸರು ಬಂಧಿಸಿದ್ದರು.
ಬಂಧನ ವಾರಂಟ್
ಸಿಬಿಐ ಕೋರ್ಟ್‌ನಿಂದ ವಾರಂಟ್ ಹಿಡಿದುಕೊಂಡು ಆ.30ರಂದು ಸಿಬಿಐ ಪೊಲೀಸರು ನಗರಕ್ಕೆ ಆಗಮಿಸಿ ವಶಕ್ಕೆ ನೀಡುವಂತೆ ನಗರದ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕೂಡ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಂಗ ಬಂಧನ: ನಗರ ಪೊಲೀಸರು ಸ್ಯಾಮ್ ಪೀಟರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮತ್ತಿಬ್ಬರು ಪೊಲೀಸ್ ಕಸ್ಟಡಿಗೆ: ಕೇಂದ್ರ ತನಿಖಾ ಸಂಸ್ಥೆ ಹೆಸರು ಬಳಸಿ ದರೋಡೆಗೆ ಯತ್ನಿಸಿದ ಮತ್ತಿಬ್ಬರು ಆರೋಪಿಗಳಾದ ಬೆಂಗಳೂರು ನಾಗರಬಾವಿ ನಿವಾಸಿಗಳಾದ ನಾಗರಾಜ, ರಾಘವೇಂದ್ರನನ್ನು ನಗರ ಪೊಲೀಸರು ಕಸ್ಟಡಿಗೆ ಪಡೆದು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.







