ಉಡುಪಿ: ಅಸ್ತಿತ್ವವನ್ನೇ ಕಳೆದುಕೊಂಡ ಎರಡು ಬ್ಯಾಂಕುಗಳು
ಉಡುಪಿ, ಆ.31: ದೇಶದ ಬ್ಯಾಂಕಿಂಗ್ ರಂಗದ ತೊಟ್ಟಿಲು ಎಂದು ಕರೆಸಿ ಕೊಳ್ಳುತಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗಳಿಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿನ್ನೆಯ ಒಂದೇ ಒಂದು ಹೇಳಿಕೆ ಯಿಂದ ನುಚ್ಚುನೂರಾಗಿದೆ. ದೇಶಕ್ಕೆ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಒಟ್ಟು ಐದು ಪ್ರಮುಖ ಬ್ಯಾಂಕುಗಳನ್ನು ನೀಡಿದ ದ.ಕ.ದಲ್ಲಿ ಈಗ ಉಳಿದಿರುವುದು ಒಂದು ಕರ್ನಾಟಕ ಬ್ಯಾಂಕ್ ಹಾಗೂ ಇನ್ನೊಂದು ಕೆನರಾ ಬ್ಯಾಂಕ್ ಮಾತ್ರ.
ಕರಾವಳಿಯ ರೈತರ ಆಶಾಕಿರಣವಾಗಿ ಹುಟ್ಟಿಕೊಂಡು ಉಳಿದೆಲ್ಲಾ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸದೃಢವಾಗಿಯೇ ಇದ್ದ ವಿಜಯಾ ಬ್ಯಾಂಕ್ ಈ ಮೊದಲೇ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದ್ದರೆ, ನಿನ್ನೆ ಒಂದೇ ಏಟಿಗೆ 113 ವರ್ಷಗಳಷ್ಟು ಹಳೆಯದಾದ ಕಾರ್ಪೋರೇಷನ್ ಬ್ಯಾಂಕ್ ಹಾಗೂ 94 ವರ್ಷಗಳನ್ನು ಪೂರೈಸಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಅಸ್ತಿತ್ವಗಳನ್ನೇ ಕಳೆದುಕೊಂಡಿದೆ.
ಉಳಿದೆಲ್ಲಾ ಪ್ರಾದೇಶಿಕ ಬ್ಯಾಂಕ್‌ಗಳಿಗೆ ಹೋಲಿಸಿದರೆ ಕನಿಷ್ಠ ಪ್ರಾದೇಶಿಕ ಅಸ್ಮಿತೆ, ಕುರುಹನ್ನು ಉಳಿಸಿಕೊಂಡಿರುವ ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್‌ನ್ನು ವಿಲೀನಗೊಳಿಸುವ ಮೂಲಕ ಕರಾವಳಿಯ ಅಸ್ಮಿತೆಯನ್ನು ಎತ್ತಿ ಹಿಡಿಯುವ ಸಂಪೂರ್ಣ ಜವಾಬ್ದಾರಿ ಈಗ ಕೆನರಾಬ್ಯಾಂಕ್ ಮೇಲಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐದು ಬ್ಯಾಂಕ್‌ಗಳಲ್ಲಿ ಕಾರ್ಪೋರೇಷನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಜನ್ಮ ತಾಳಿದ್ದು ಕೃಷ್ಣನೂರಿನಲ್ಲಿ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬದಲಿಸುವಲ್ಲಿ ಜಿಲ್ಲೆಯ ಎರಡು ಬ್ಯಾಂಕುಗಳ ಪಾತ್ರ ಸಣ್ಣದೇನಲ್ಲ.ದೇಶದ ಜನತೆಗೆ ಸಣ್ಣ ಉಳಿತಾಯದ ಮಹತ್ವವನ್ನು ಸಾರಿದ್ದೇ ಸಿಂಡಿಕೇಟ್ ಬ್ಯಾಂಕ್ ತನ್ನ ಪಿಗ್ಮಿ ಉಳಿತಾಯದ ಮೂಲಕ.
ಕಾರ್ಪೋರೇಷನ್ ಬ್ಯಾಂಕ್: ದಾನಶೂರ ಕರ್ಣನೆಂದೇ ಖ್ಯಾತರಾದ ಅಗರ್ಭ ಶ್ರೀಮಂತ ಉಡುಪಿಯ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು 1906ರಲ್ಲಿ ಕೇವಲ 5000ರೂ. ಮೂಲಬಂಡವಾಳದೊಂದಿಗೆ ಸ್ಥಾಪಿಸಿದ ಕಾರ್ಪೋರೇಷನ್ ಬ್ಯಾಂಕ್ ಇಂದು ದೇಶದ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ತಂತ್ರಜ್ಞಾನದ ಅಳವಡಿಕೆಯಲ್ಲೂ ಮೇಲುಗೈ ಹೊಂದಿತ್ತು. ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್ ಬ್ಯಾಂಕ್ 1972ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿ ಇದೀಗ 3.20 ಲಕ್ಷ ಕೋಟಿ ರೂ.ವಾರ್ಷಿಕ ವಹಿವಾಟವನ್ನು ಹೊಂದಿತ್ತು. 2500ಕ್ಕೂ ಅಧಿಕ ಬ್ಯಾಂಕ್ ಶಾಖೆಗಳು, 3000ಕ್ಕೂ ಅಧಿಕ ಎಟಿಎಂಗಳನ್ನೂ 17 ಸಾವಿರಕ್ಕೂ ಅಧಿಕ ನೌಕರನ್ನು ಹೊಂದಿದೆ.
ಸಿಂಡಿಕೇಟ್ ಬ್ಯಾಂಕ್: ಆಧುನಿಕ ಮಣಿಪಾಲದ ರೂವಾರಿ ಎನಿಸಿದ ಡಾ. ಟಿಎಂಎ ಪೈ ಅವರು, ತನ್ನ ಹಿರಿಯ ಸಹೋದರ ಉಪೇಂದ್ರ ಪೈ ಹಾಗೂ ಮಂಗಳೂರಿನ ವಾಮನ ಕುಡ್ವ ಅವರ ಜೊತೆ ಸೇರಿ 6000ರೂ. ಮೂಲ ಬಂಡವಾಳದೊಂದಿಗೆ 1925ರಲ್ಲಿ ಪ್ರಾರಂಭಿಸಿದ ಸಿಂಡಿಕೇಟ್ ಬ್ಯಾಂಕ್ ಇಂದು 4.77 ಲಕ್ಷ ಕೋಟಿ ರೂ.ವಾರ್ಷಿಕ ವ್ಯವಹಾರ ನಡೆಸುತ್ತಿದೆ. 4000ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಬ್ಯಾಂಕ್ 31ಸಾವಿರ ನೌಕರರನ್ನು ಹೊಂದಿದೆ. ಜಿಲ್ಲೆಯ ಜನತೆಗೆ ಉಳಿತಾಯದ ಮಹತ್ವವನ್ನು ಹೇಳಿಕೊಟ್ಟ ಶ್ರೇಯಸ್ಸು ಈ ಬ್ಯಾಂಕಿಗೆ ಸಲ್ಲುತ್ತದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸರ್ವಾಂಗೀಣ ಪ್ರಗತಿಯಲ್ಲಿ ಈ ಬ್ಯಾಂಕ್‌ಗಳ ಪಾತ್ರ ಹಿರಿದು. ಶಿಕ್ಷಣ, ಆರೋಗ್ಯ ಹಾಗೂ ಸಾಕ್ಷರತೆಯಲ್ಲಿ ದೇಶದ ಮುಂಚೂಣಿ ಜಿಲ್ಲೆಯಾಗಿರುವ ಇಲ್ಲಿನ ಶೇ.95ಕ್ಕೂ ಅಧಿಕ ಜನಸಂಖ್ಯೆ ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿರುವುದು ಒಂದು ದಾಖಲೆಯಾಗಿದೆ. ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸಾಲ ಮರುಪಾವತಿಯಲ್ಲೂ ಕರಾವಳಿಯ ಜನತೆ ಹೆಮ್ಮೆ ಪಡುವ ದಾಖಲೆ ಹೊಂದಿದ್ದಾರೆ.
ಈ ಎಲ್ಲಾ ಸಾಧನೆಗಳ ಹೊರತಾಗಿಯೂ ಉಡುಪಿ ಜಿಲ್ಲೆಯ ಎರಡೂ ಬ್ಯಾಂಕ್‌ಗಳು ಶೀಘ್ರವೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿರುವುದು ಜಿಲ್ಲೆಯ ಜನರ ಪಾಲಿಗೆ ಮಾಗದ ಗಾಯವಾಗುಳಿಯಲಿದೆ.







