ಸರಕಾರ ಸಂಸತ್ತಿನಲ್ಲಿ ಎನ್‌ಆರ್‌ಸಿ ರಚಿಸಲಿ : ಅಧೀರ್ ಚೌಧುರಿ

ಹೊಸದಿಲ್ಲಿ, ಆ.31: ಅಸ್ಸಾಂನಲ್ಲಿ ಪೌರತ್ವ ನೋಂದಣಿ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಟೀಕಿಸಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ , ಕೇಂದ್ರ ಸರಕಾರ ಸಂಸತ್ತಿನಲ್ಲಿ ಎನ್‌ಆರ್‌ಸಿ ರಚಿಸಬೇಕು ಎಂದು ಹೇಳಿದ್ದಾರೆ.
“ಈ ದೇಶ ಅವರಿಗೇ ಸೇರಿದೆ. ಅವರು ಇಷ್ಟಪಟ್ಟಲ್ಲೆಲ್ಲಾ ಎನ್‌ಆರ್‌ಸಿ ರಚಿಸಬಹುದು. ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ನಿಭಾಯಿಸಲು ವಿಫಲರಾದರು, ಈಗ ಉಳಿದ ರಾಜ್ಯಗಳತ್ತ ಕಣ್ಣು ಹಾಯಿಸಬಹುದು. ಸಂಸತ್ತಿನಲ್ಲೂ ಎನ್‌ಆರ್‌ಸಿ ರಚಿಸಬೇಕು. ನನ್ನ ತಂದೆ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಕಾರಣ ನಾನೂ ಓರ್ವ ವಿದೇಶೀಯ” ಎಂದು ಚೌಧುರಿ ಹೇಳಿದರು.
ನೈಜ ಪ್ರಜೆಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಕೈಬಿಡಬಾರದು. ಎಲ್ಲಾ ನೈಜ ಪ್ರಜೆಗಳಿಗೆ ರಕ್ಷಣೆ ಒದಗಿಸಬೇಕು ಎಂದವರು ಹೇಳಿದರು. ಅಸ್ಸಾಂನಲ್ಲಿ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಯಾಗಿದ್ದು 19 ಲಕ್ಷಕ್ಕೂ ಹೆಚ್ಚು ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪಟ್ಟಿ ಬಿಡುಗಡೆಯಾದ ಬಳಿಕ ದಿಲ್ಲಿಯಲ್ಲಿ 10 ಜನಪಥ್‌ನಲ್ಲಿರುವ ಕಚೇರಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಮುಖಂಡರು ಎನ್‌ಆರ್‌ಸಿ ಪಟ್ಟಿಯ ಬಗ್ಗೆ ಚರ್ಚಿಸಿದರು. ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ಮುಖಂಡರಾದ ಎಕೆ ಆ್ಯಂಟನಿ, ಗೌರವ್ ಗೊಗೋಯ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.







