ಬ್ಯಾಂಕ್‌ಗಳ ವಿಲೀನ ಕ್ರಮಕ್ಕೆ ವಿರೋಧ: ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ಪ್ರತಿಭಟನೆ

ಮಂಗಳೂರು, ಆ.31: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಕೇಂದ್ರ ಸರಕಾರ ತನ್ನ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ ನಗರದ ಕಾರ್ಪೊರೇಶನ್ ಬ್ಯಾಂಕ್ ಎದುರು ಶನಿವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಸಂಘದ ಉಪ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಬ್ಯಾಂಕ್ ಅಸೋಸಿಯೇಶನ್ ಅಧ್ಯಕ್ಷ ಪಿ.ಆರ್.ಕಾರಂತ ಮಾತನಾಡಿ, ಕೇಂದ್ರ ಸರಕಾರವು ವಿಲೀನ ಪ್ರಕ್ರಿಯೆ ಮುಂದುವರಿಸುವುದು ಬೇಡ. ಕೂಡಲೇ ವಾಪಸ್ ಪಡೆಯಬೇಕು. ಕೇಂದ್ರದ ಇಂತಹ ಕೆಟ್ಟ ನಿರ್ಧಾರದಿಂದ ಜನಸಾಮಾನ್ಯರಿಗೆ ಭಾರೀ ಹೊಡೆತ ಬೀಳಲಿದೆ. ಬಡಜನರು, ಗ್ರಾಮೀಣ ಭಾಗದವರು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಆರ್ಥಿಕತೆ ಸದ್ಯ ಕುಸಿತ ಕಾಣುತ್ತಿದೆ. ಇದೇ ರೀತಿ ಬ್ಯಾಂಕ್ ವಿಲೀನ ಮಾಡದರೆ ಆರ್ಥಿಕತೆ ಪಾತಾಳಕ್ಕೆ ಕುಸಿಯಲಿದೆ. ಪ್ರಧಾನಿ ನರೇಂದ್ರ ಮೋದಿಗೆ ಮಹತ್ವದ ಜ್ಞಾನವಿಲ್ಲ. ಇದು ನೇರವಾಗಿ ಜನಸಾಮಾನ್ಯರು ಪರಿತಪಿಸುವಂತಹ ನಿರ್ಧಾರವಾಗಿದೆ. ಕೇಂದ್ರ ಸರಕಾರದ ದಬ್ಬಾಳಿಕೆಯನ್ನು ಖಂಡಿಸುವ ಸಮಯ ಬಂದಿದೆ. ನಿರಂತರ ಹೋರಾಟ ಅಗತ್ಯವಿದೆ ಎಂದು ತಿಳಿಸಿದರು.
ಸಾರ್ವಜನಿಕ ವಲಯದ ಸ್ಥಳೀಯ ಬ್ಯಾಂಕ್‌ಗಳು ಲಾಭದಲ್ಲಿದ್ದು, ಪ್ರಾಮಾಣಿಕ ಸೇವೆ ನೀಡುತ್ತಿವೆ. ದೇಶದ ಬೃಹತ್ ಬ್ಯಾಂಕ್‌ಗಳು ಮೋಸ ಮಾಡುತ್ತಿದ್ದು, ಇತ್ತೀಚೆಗೆ ಹಲವು ಅಕ್ರಮ ನಡೆದಿರುವ ಆರೋಪಗಳಿವೆ. ಸ್ಥಳೀಯ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್‌ಗಳ ನೂರಾರು ಅಧಿಕಾರಿಗಳು, ನೌಕರರು ಪಾಲ್ಗೊಂಡು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.
ಕಾರ್ಪೊರೇಶನ್ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ವಿನ್ಸೆಂಟ್ ಡಿಸೋಜ, ಸತೀಶ್ ಶೆಟ್ಟಿ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಸತೀಶ್ ಅಗಿತಾಯ, ಎನ್‌ಸಿಬಿ ಆಡಿ ರೆಗೊ ಮತ್ತಿತರರು ಉಪಸ್ಥಿತರಿದ್ದರು.







