ನೆರೆ ಬಂದು ಕೊಚ್ಚಿ ಕೊಂಡು ಹೋದರೂ ನೆರವಿಗೆ ಬಾರದ ಪ್ರಧಾನಿ -ಸಿದ್ದರಾಮಯ್ಯ

ಮಂಗಳೂರು, ಆ. 31: ದೇಶದಲ್ಲಿ ಕರ್ನಾಟಕ, ಕೇರಳ ತೆಲಂಗಾಣ ಸೇರಿದಂತೆ ಉತ್ತರ, ದಕ್ಷಿಣ ಭಾರತದಲ್ಲಿ ಕಂಡು ಕೇಳರಿಯದ ರೀತಿಯ ಪ್ರವಾಹ ಬಂದು ಜನರ ಆಸ್ತಿಪಾಸ್ತಿ ಕಳೆದು ಕೊಂಡು ಬೀದಿ ಪಾಲಾಗಿದ್ದರೂ ದೇಶದ ಪ್ರಧಾನಿ ನೆರವಿಗೆ ಬಂದಿಲ್ಲಾ, ವಿದೇಶ ಪ್ರಯಾಣಕ್ಕೆ ತೆರಳಿ ಶೋಕಿ ಮಾಡುತ್ತಿದ್ದಾರೆ ಅವರ ಆಧ್ಯತೆ ಏನು ಎನ್ನುವುದೆ ನನಗೆ ಅರ್ಥವಾಗ್ತಾ ಇಲ್ಲ ಎಂದು ರಾಜ್ಯದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಅವರು ನಗರದ ಪುರಭವನದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಎಲ್ಲಾ ನದಿಗಳಲ್ಲಿ ಹುಚ್ಚು ಪ್ರವಾಹ ಬಂತು.105 ವರ್ಷಗಳ ನಂತರ ಈ ರೀತಿಯ ನೆರೆ ಬಂದಿದೆ.1ಲಕ್ಷ ಕುಟುಂಬಗಳ ಕನಿಷ್ಠ 4ಲಕ್ಷ ಜನರು ಬೀದಿ ಪಾಲಾಗಿದ್ದಾರೆ.ಸುಮಾರು ಸಾವಿರ ಹಳ್ಳಿಗಳು ಮುಳುಗಡೆಯಾಗಿದೆ. 88ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಇಂತಹ ಅನಾಹುತವನ್ನು ಹಿಂದೆಂದೂ ಕಂಡಿಲ್ಲಾ ಆದರೆ ಕೇಂದ್ರದ ಪ್ರಧಾನಿ ರಾಜ್ಯದ ಕಡೆ ಮುಖ ಹಾಕಿಲ್ಲ. ರಾಜ್ಯದ ಮುಖ್ಯ ಮಂತ್ರಿ ಹಣಬಿಡುಗಡೆ ಮಾಡುವಲ್ಲಿ ವಿಫಲರಾಗಿದ್ದಾರೆ. 2009ರಲ್ಲಿ ರಾಜ್ಯದಲ್ಲಿ ನೆರೆ ಬಂದಾಗ ತಕ್ಷಣ ಸ್ಪಂದಿಸಿದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ತಕ್ಷಣ 1600 ಕೊಟಿ ರೂ. ಬಿಡುಗಡೆ ಮಾಡಿ ಸ್ಪಂದಿಸಿದ್ದಾರೆ. ಆದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಬಡವರ ಪರವಾಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ರೈತರ ಪರವಾಗಿರುವ , ಬಡವರ ಪರವಾಗಿರುವ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಅನ್ನ ಭಾಗ್ಯ ದಂತಹ ಯೋಜನೆಗಳನ್ನು ಸ್ಥಗಿತಗೊಳಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
52 ಇಂಚಿನ ಎದೆ ಇದ್ದರೆ ಸಾಲದು ಬಡವರಿಗೆ ನೆರವಾಗುವ ತಾಯಿಯ ಹೃದಯ ಇರುವ ನಾಯಕ ಈ ದೇಶಕ್ಕೆ ಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರ ಹಿಡಿದವರು
ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಬಹುಮತವಿಲ್ಲದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ಹಿಂಬಾಗಿಲಿನಿಂದ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಹಣದ ಆಮಿಷ ನೀಡಿ ಕುದುರೆ ವ್ಯಾಪಾರ ಮಾಡಿ ಅಧಿಕಾರ ಹಿಡಿದಿದೆ. ಈ ಹಣ ಎಲ್ಲಿಂದ ಬಂತು ಎಂದು ದೇಶದ ಜಾರಿ ನಿರ್ದೇಶನಾಲಯ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶ ಮಾಡಲು ಬಿಜೆಪಿ ಹೊರಟಿದೆ, ಇಡಿ, ಚುನಾವಣಾ ಆಯೋಗ, ಸಿಬಿಐ ಸೇರಿದಂತೆ ಪ್ರಜಾ ಪ್ರಭುತ್ವದ ಪ್ರಮುಖ ಸಂಸ್ಥೆಗಳನ್ನು ದುರಪಯೋಗ ಮಾಡಿಕೊಂಡು ಕೇಂದ್ರದಲ್ಲಿರುವ ಮೋದಿ ನೇತ್ರತ್ವದ ಸರಕಾರ ಸೇಡಿ ರಾಜಕೀಯದಲ್ಲಿ ತೊಡಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಬಡವರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ನೀಡಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ್ದಾರೆ. ಆದರೆ ಮೋದಿ ನೇತೃತ್ವದ ಸರಕಾರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಮಂತ ಸಾಲಗಾರರಿಗೆ ನೆರವು ನಿಡಲು 27 ಬ್ಯಾಂಕ್‌ಗಳನ್ನು ಮುಚ್ಚಿ 12 ಬ್ಯಾಂಕ್‌ಗಳನ್ನಾಗಿ ಮಾಡಲು ಹೊರಟಿದ್ದಾರೆ. ಬ್ಯಾಂಕ್‌ಗಲ್ಲಿ (ಎನ್‌ಪಿಎ ) ಪಾವತಿಯಾಗದ ಬಾಕಿ ಉಳಿದ ಸಾಲಗಾರರಲ್ಲಿ ಬಡವರಿಲ್ಲ. ಕೊಟ್ಯಾಂತರ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೆ ಇರುವವರಲ್ಲಿ ಹೆಚ್ಚಿನವರು ಶ್ರೀಮಂತರು, ಬಂಡವಾಳ ಶಾಹಿಗಳು.ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್‌ಗಳ ತವರೂರು ಅಂತಹ ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗಿದೆ. ಹಸಿರು ಶಾಲು ಹಾಕಿದರೆ ಸಾಲದು ರೈತರ ಬಗ್ಗೆ ನಿಜವಾದ ಕಾಳಜಿ ಇರಬೇಕಿತ್ತು. ರಸಗೊಬ್ಬರ, ಬೀಜ ಕೇಳಿದ ರೈತರ ಮೇಲೆ ಗೋಲಿಬಾರು ನಡೆದಿದೆ. ಸರಕಾರ ನೆರೆಗೆ ಸಂತ್ರಸ್ತರಾದವರಿಗೆ ನೆರ ವಾಗುತ್ತಿಲ್ಲ, ರೈತರ ಸಾಲಮನ್ನಾದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲಾ ಬಡವರಿಗೆ ನೆರವಾಗುವ ಯೋಜನೆ ಜಾರಿಗೆ ಆಸಕ್ತಿ ಇಲ್ಲ. ಹೀಗಿರುವಾಗ ಹಸಿರು ಶಾಲು ಯಾವ ಕಾರಣಕ್ಕೆ ಹಾಕುತ್ತೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.







