ಪ್ರಜಾಪ್ರಭುತ್ವಕ್ಕೆ ಇತಿಹಾಸ ಅನ್ವಯವಲ್ಲ: ಪ್ರೊ.ವಿವೇಕ್ ರೈ
‘ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರಬೋಸ್’ ಪುಸ್ತಕ ಲೋಕಾರ್ಪಣೆ

ಮಂಗಳೂರು, ಆ.31: ಇತಿಹಾಸದಲ್ಲಿ ನಡೆದ ಯುದ್ಧ ಮತ್ತು ಘಟನೆಗಳನ್ನು ಅರಿತುಕೊಂಡರೆ ಸಾಕು. ಅದನ್ನು ಹೋಲಿಕೆ ಮಾಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವಕ್ಕೆ ಇತಿಹಾಸ ಅನ್ವಯವಾಗುವುದಿಲ್ಲ ಎಂದು ವಿಶ್ರಾಂತ ಕುಲಪತಿ, ಹಿರಿಯ ವಿದ್ವಾಂಸ ಪ್ರೊ.ಬಿ.ಎ.ವಿವೇಕ್ ರೈ ಪ್ರತಿಪಾದಿಸಿದ್ದಾರೆ.
ಕನ್ನಡ ಓದುಗ ಬಳಗ ಮಂಗಳೂರು ಆಶ್ರಯದಲ್ಲಿ ‘ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರಬೋಸ್’ ಪುಸ್ತಕವನ್ನು ನಗರದ ಶ್ರೀನಿವಾಸ ಹೋಟೆಲ್‌ನಲ್ಲಿ ಶನಿವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಮುಸ್ಲಿಂ ದೊರೆಯೊಬ್ಬ ತಪ್ಪು ಮಾಡಿದ್ದರೆ, ಅದರ ಕುರಿತು ಇಂದಿನ ಮುಸ್ಲಿಮರು ಸಮರ್ಥಿಸುವ ಅಗತ್ಯವಿಲ್ಲ. ಅದರಂತೆ, ಹಿಂದೂ ದೊರೆಯೊಬ್ಬ ತಪ್ಪು ಮಾಡಿದ್ದರೆ ಅದನ್ನು ಮುಚ್ಚಿಹಾಕುವ ಅಗತ್ಯ ಮತ್ತೊಬ್ಬರಿಗಿಲ್ಲ. ಅರಿತುಕೊಂಡು, ಅಧ್ಯಯನ ಮಾಡಿಕೊಂಡು ಬಾಳಬೇಕು ಎಂದು ಅವರು ಸಲಹೆ ನೀಡಿದರು.
ರಾಜಪ್ರಭುತ್ವದ ಕಾರಣಗಳನ್ನು ಹೆಕ್ಕಿ ತೆಗೆದು, ಅದನ್ನು ಈಗಿನ ಪ್ರಜಾಪ್ರಭುತ್ವದಲ್ಲಿ ಸರಿಪಡಿಸಲಾಗಲ್ಲ. ಇತಿಹಾಸ ಕಾಲದಲ್ಲಿ ರಾಜ್ಯದ ವಿಸ್ತರಣೆಗಾಗಿ ಯುದ್ಧಗಳನ್ನು ಮಾಡುತ್ತಿದ್ದರು. ಅವುಗಳು ಧಾರ್ಮಿಕ ಯುದ್ಧಗಳಲ್ಲ. ಪ್ರಜಾಪ್ರಭುತ್ವದ ಇಂದಿನ ಪ್ರಜೆಗಳು ಕ್ಷುಲ್ಲಕ ರಾಜಕೀಯಕ್ಕೆ ಬಲಿಪಶುವಾಗುವುದು ನಿಜಕ್ಕೂ ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳು ಇಂದು ತುಂಬ ವೇಗ ಪಡೆದಿವೆ. ಇನ್ನಿಲ್ಲದಂತೆ ಎಲ್ಲೆಡೆ ವ್ಯಾಪಿಸಿವೆ. ಇದರಲ್ಲಿ ಸತ್ಯದ ಸಂಗತಿಗಳಿಗಿಂತ ಗಾಳಿಸುದ್ದಿಗಳೇ ವ್ಯಾಪಕವಾಗಿವೆ. ಇದು ಇಂದಿನ ಯುವ ಜನಾಂಗವು ತಪ್ಪು ಹಾದಿ ತುಳಿಯುವಂತೆ ಪ್ರೇರೇಪಿಸುತ್ತಿವೆ. ಯುವ ಜನಾಂಗವು ಅಧ್ಯಯನಶೀಲರಾಗಬೇಕು. ಆಗ ಮಾತ್ರ ವಿಮರ್ಷೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅತಿಹೆಚ್ಚು ಬಳಕೆ ಮತ್ತು ದುರ್ಬಳಕೆಯಾದ ಶಬ್ದವಿದ್ದರೆ ಅದು ‘ಸೆಕ್ಯುಲರಿಸಂ’ ಮಾತ್ರ. ವಾಸ್ತವದಲ್ಲಿ ಈ ಶಬ್ದ 19ನೇ ಶತಮಾನದಲ್ಲಿ ಯುರೋಪಿನಲ್ಲಿ ಬಳಕೆಗೆ ಆರಂಭವಾಯಿತು. ಅಮೆರಿಕ ಸೇರಿದಂತೆ ಹಲವು ದೇಶಗಳ ತರುವಾಯ ಭಾರತಕ್ಕೂ ಬಂತು. ದೇಶವೊಂದು ಧರ್ಮನಿರಪೇಕ್ಷವಾಗಿರಬೇಕು ಎನ್ನುವುದು ಅದರ ಅರ್ಥ ಎಂದರು.
ಸೆಕ್ಯುಲರಿಸಂಗೆ ಮೊದಲು ಧರ್ಮದೊಳಗೆ ಕಾನೂನು ಮಾಡಬಾರದು ಎನ್ನುವ ಅರ್ಥವಿತ್ತು. ಆದರೆ ಇದು ಕಾಲಕ್ರಮೇಣ ಬದಲಾಗುತ್ತಿದೆ. ರಾಜಕೀಯ ಪ್ರಭುತ್ವದ ಕಾರಣಕ್ಕೆ ಅರ್ಥಗಳು ವ್ಯತ್ಯಾಸವಾಗುತ್ತಾ ಬಂದಿತು. ಇಂದು ಸೆಕ್ಯುಲರಿಸಂ ಪದದ ಅರ್ಥ ಅನರ್ಥವಾಗಿದೆ. ಪುಸ್ತಕದಲ್ಲಿ ವಿವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರಬೋಸ್ ಪುಸ್ತಕದ ಲೇಖಕ, ‘ಪ್ರಜಾವಾಣಿ’ ಸಹಸಂಪಾದಕ ಬಿ.ಎಂ.ಹನೀಫ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಅಡ್ವೋಕೇಟ್ ಬಿ.ಎ.ಮುಹಮ್ಮದ್ ಹನೀಫ್, ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಫಾ.ನೆಲ್ಸನ್ ಅಲ್ಮೇಡಾ ಉಪಸ್ಥಿತರಿದ್ದರು.
ರಫೀಕ್ ಮಾಸ್ಟರ್ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.







