'ಸುವರ್ಣ ತ್ರಿಭುಜ ಬೋಟ್ ದುರಂತ: ಮೀನುಗಾರರ ಕುಟುಂಬಕ್ಕೆ ಹೆಚ್ಚುವರಿ 4 ಲಕ್ಷ ರೂ. ಚೆಕ್ ವಿತರಣೆ'

ಭಟ್ಕಳ: ಸುವರ್ಣ ತ್ರಿಭುಜ ಬೋಟಿನ ದುರಂತದಲ್ಲಿ ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕ್ಷೇತ್ರದ ಮೂರು ಸಂತ್ರಸ್ತ ಕುಟುಂಬಗಳ ಮನೆಗಳಿಗೆ ಶಾಸಕ ಸುನೀಲ ನಾಯ್ಕ, ತಹಸೀಲ್ದಾರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಕುಟುಂಬದ ನೆರವಿಗಾಗಿ ಕೊನೆಯ ಹಂತದ ಹೆಚ್ಚುವರಿ ಪರಿಹಾರವಾಗಿ 4 ಲಕ್ಷ ರೂಪಾಯಿ ಚೆಕ್‍ನ್ನು ಕುಟುಂಬದ ಸದಸ್ಯರಿಗೆ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಬೋಟ ದುರಂತದಲ್ಲಿ ಭಟ್ಕಳದ ಅಳ್ವೇಕೋಡಿ ಹರೀಶ ಶನಿಯಾರ ಮೋಗೇರ, ಮಾವಿನಕುರ್ವೇ ಬೆಳ್ನಿಯ ರಮೇಶ ಶನಿಯಾರ ಮೋಗೇರ ಹಾಗೂ ಮಂಕಿಯ ರವಿ ನಾಗಪ್ಪ ಹರಿಕಾಂತ ಅವರು ನಾಪತ್ತೆಯಾಗಿದ್ದರು. ಈ ಹಿಂದೆ ಕೇಂದ್ರ ಸರ್ಕಾರದಿಂದ ನಾಪತ್ತೆಯಾದ ಮೀನುಗಾರ ಕುಟುಂಬ ನಿರ್ವಹಣೆಗಾಗಿ ಬಂದಂತಹ 6 ಲಕ್ಷ ರೂ. ಪರಿಹಾರದ ಹೊರತಾಗಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕುಟುಂಬದ ನಿರ್ವಹಣೆಗೆ ತಾತ್ಕಾಲಿಕವಾಗಿ ತಲಾ 1 ಲಕ್ಷ ರೂ. ಹಣವನ್ನು ನೀಡಲಾಗಿತ್ತು.
ಈಗ ಕೇಂದ್ರ ಸರಕಾರದಿಂದ ಕೊನೆಯ ಹಂತವಾಗಿ ಹೆಚ್ಚುವರಿ ಪರಿಹಾರವಾಗಿ 4 ಲಕ್ಷ ರೂಪಾಯಿ ಚೆಕ್‍ನ್ನು ಕುಟುಂಬದ ಸದಸ್ಯರುಗಳ ಪೈಕಿ ಕಣ್ಮರೆಯಾದ ಮೀನುಗಾರರಲ್ಲಿ ಭಟ್ಕಳದ ಅಳ್ವೇಕೋಡಿ ಹರೀಶ ಶನಿಯಾರ ಮೋಗೇರ, ಮಾವಿನಕುರ್ವೇ ಬೆಳ್ನಿಯ ರಮೇಶ ಶನಿಯಾರ ಮೋಗೇರ ಅವರ ಮನೆಗಳಿಗೆ ಕುದ್ದು ತೆರಳಿ ಹಸ್ತಾಂತರಿಸಲಾಯಿತು. ಹಾಗೂ ಮಂಕಿಯ ಮೀನುಗಾರ ರವಿ ನಾಗಪ್ಪ ಹರಿಕಾಂತ ಅವರ ಕುಟುಂಬಸ್ಥರಿಗೆ ಭಟ್ಕಳ ತಾಲೂಕಾ ಪಂಚಾಯತ ಶಾಸಕರ ಕಛೇರಿಯಲ್ಲಿ ಶಾಸಕ ಸುನೀಲ ನಾಯ್ಕ ವಿತರಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ 'ಜಿಲ್ಲೆಯಲ್ಲಿ ಕಳೆದ ಏಳೆಂಟು ತಿಂಗಳ ಹಿಂದೆ ನಡೆದಂತಹ ವಿಕಾರವಾದ ದುರ್ಘಟನೆಯಾದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದೆ. ಅದರಲ್ಲು ಭಟ್ಕಳದ ಬೆಳ್ನಿಯ ಕಣ್ಮರೆಯಾದ ಮೀನುಗಾರ ಹರೀಶ ಮೊಗೇರ ಸಹೋದರ ಕೂಡ ಅಣ್ಣನ ಸಾವಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಬಹಳ ನೋವು ತರುವಂತಹ ವಿಷಯವಾಗಿದೆ.
ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕರಾವಳಿ ಭಾಗದ ಎಲ್ಲಾ ಶಾಸಕರು ಸೇರಿ ಕುಟುಂಬಗಳಿಗೆ ಮನವಿ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಒತ್ತಾಯಿಸಲಾಗಿದೆ. ನಿರ್ಮಲ ಸೀತರಾಮನ್, ಶೋಭಾ ಕರಂದ್ಲಾಜೆ, ನವೀನ ಕುಮಾರ ಕಟೀಲ್, ಹಾಗೂ ಮಾಜಿ ಕೇಂದ್ರ ಸಚಿವರಾದ ಅನಂತ ಕುಮಾರ ಹೆಗಡೆ ನೇತೃತ್ವದಲ್ಲಿ ಕೊಟ್ಟಿರುವ ಮನವಿಗೆ ಸ್ಪಂದಿಸಿ ಮೃತ ಮೀನುಗಾರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೆರವಾಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇವೆ. ಇನ್ನೂ ಮುಂದಿನ ದಿನಗಳಲ್ಲಿ ಕೂಡ ಈ ಸಹೋದರರ ಕುಟುಂಬಕ್ಕೆ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದು ಹೇಳಿದರು.







