ಇಂದಿನಿಂದ ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವ ಭಾರತೀಯರ ವಿವರಗಳು ಲಭ್ಯ

ಹೊಸದಿಲ್ಲಿ,ಆ.31: ಎರಡು ದೇಶಗಳ ಮಧ್ಯೆ ಮಾಹಿತಿಯ ಸ್ವಯಂಚಾಲಿತ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳುವ ಮೂಲಕ ರವಿವಾರದಿಂದ ಸ್ವಿಟ್ಝರ್ಲ್ಯಾಂಡ್ನ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ಭಾರತೀಯರ ವಿವರಗಳು ತೆರಿಗೆ ಇಲಾಖೆಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಕಪ್ಪುಹಣದ ವಿರುದ್ಧ ಸರಕಾರದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಮತ್ತು ಸ್ವಿಸ್ ಬ್ಯಾಂಕ್ನ ರಹಸ್ಯ ಯುಗ ಸೆಪ್ಟಂಬರ್ನಿಂದ ಕೊನೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಸ್ವಯಂಚಾಲಿತ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೂ ಮೊದಲು ಆಗಸ್ಟ್ 29 ಮತ್ತು 30ರ ಮಧ್ಯೆ ಸ್ವಿಟ್ಝರ್ಲ್ಯಾಂಡ್ನ ಸರಕಾರಿ ಕಾರ್ಯಾಲಯದ ತೆರಿಗೆ ವಿಭಾಗದ ಉಪಾಧ್ಯಕ್ಷ ನಿಕೊಲ್ ಮಾರಿಯೊ ಲುಶರ್ ನೇತೃತ್ವದ ಸ್ವಿಸ್ ನಿಯೋಗ ಭಾರತದ ಕಂದಾಯ ಕಾರ್ಯದರ್ಶಿ ಎ.ಬಿ ಪಾಂಡೆ, ಸಿಬಿಡಿಟಿ ಮುಖ್ಯಸ್ಥ ಪಿ.ಸಿ ಮೋದಿ ಮತ್ತು ಸಿಬಿಡಿಟಿ ಸದಸ್ಯ (ಶಾಸನ) ಅಖಿಲೇಶ್ ರಂಜನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಸ್ವಿಸ್ ನೀಡುವ ಮಾಹಿತಿಯಲ್ಲಿ 2018ರ ಅವಧಿಯಲ್ಲಿ ಮುಚ್ಚಲ್ಪಟ್ಟ ಖಾತೆಗಳ ವಿವರಗಳೂ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.