ಸ್ಯಾಫ್ ಅಂಡರ್-15 ಚಾಂಪಿಯನ್‌ಶಿಪ್: ಭಾರತಕ್ಕೆ ಪ್ರಶಸ್ತಿ

ಕಲ್ಯಾಣಿ, ಆ.31: ಸ್ಟ್ರೈಕರ್ ಶ್ರೀದರ್ತ್ ನೊಂಗ್ಮಿಕಾಪಮ್ ದಾಖಲಿಸಿದ ಹ್ಯಾಟ್ರಿಕ್ ಗೋಲ್ ನೆರವಿನಿಂದ ಸ್ಯಾಫ್ ಅಂಡರ್-15 ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದುಕೊಂಡಿದೆ.
ಇಲ್ಲಿನ ಕಲ್ಯಾಣಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ತಂಡ ನೇಪಾಳ ತಂಡವನ್ನು 7-0 ಗೋಲುಗಳ ಅಂತರದಿಂದ ಬಗ್ಗುಬಡಿಯಿತು.
ಭಾರತದ ಪರ ಶ್ರೀದರ್ತ್(51ನೇ, 76ನೇ, 80ನೇ ನಿಮಿಷ)ಹ್ಯಾಟ್ರಿಕ್ ಗೋಲು ಗಳಿಸಿದರೆ, ಮಹೆಸನ್ ಸಿಂಗ್(15ನೇ ನಿಮಿಷ), ಅಮನ್‌ದೀಪ್(42ನೇ ನಿ.), ಸಿಬಾಜಿತ್ ಸಿಂಗ್(45ನೇ ನಿ.) ಹಾಗೂ ಹಿಮಾಂಶು ಜಾಂಗ್ರಾ(65ನೇ ನಿ.)ತಲಾ ಒಂದು ಗೋಲು ಗಳಿಸಿದರು.
ಈ ಗೆಲುವಿನೊಂದಿಗೆ ಭಾರತ ಟೂರ್ನಮೆಂಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿತು. 2013 ಹಾಗೂ 2017ರಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ ಇದೀಗ ಮೂರನೇ ಬಾರಿ ಈ ಸಾಧನೆ ಮಾಡಿದೆ. ಟೂರ್ನಮೆಂಟ್‌ನ ಐದು ಪಂದ್ಯಗಳಲ್ಲಿ ಬಿಬಿಯಾನೊ ಫೆರ್ನಾಂಡಿಸ್ ಮಾರ್ಗದರ್ಶನದಲ್ಲಿ ಭಾರತ ತಂಡ ಸಂಪೂರ್ಣ ಪ್ರಭುತ್ವ ಸಾಧಿಸಿದ್ದು,ಒಟ್ಟು 28 ಗೋಲುಗಳನ್ನು ಗಳಿಸಿತ್ತು.
‘‘ನಾವು ಚಾಂಪಿಯನ್ ಆಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾವು ಇಲ್ಲಿಗೆ ಗುರಿಯೊಂದಿಗೆ ಬಂದಿದ್ದೆವು. ಆ ಗುರಿಯನ್ನು ಸಾಧಿಸಿದ್ದೇವೆ. ಇದು ಎಎಫ್‌ಸಿ ಕ್ವಾಲಿಫೈಯರ್‌ಗೆ ಪೂರ್ವ ತಯಾರಿಯಾಗಿದೆ. ನಾವು ಸಾಧನೆ ಮಾಡಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಈ ಗೆಲುವು ನೀಡಿದೆ’’ಎಂದು ಕೋಚ್ ಫೆರ್ನಾಂಡಿಸ್ ಹೇಳಿದ್ದಾರೆ. ಭಾರತಕ್ಕೆ ಸೆ.18ರಿಂದ ಆರಂಭವಾಗಲಿರುವ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್ ಪ್ರಮುಖ ಸವಾಲಾಗಿದೆ. ಚಾಂಪಿಯನ್‌ಶಿಪ್‌ನಲ್ಲಿ ‘ಬಿ’ ಗುಂಪಿನಲ್ಲಿರುವ ಭಾರತ ತಂಡ ಆತಿಥೇಯ ಉಜ್ಬೇಕಿಸ್ತಾನ, ಬಹರೈನ್ ಹಾಗೂ ತುರ್ಕ್‌ಮೆನಿಸ್ತಾನ ತಂಡಗಳನ್ನು ಎದುರಿಸಲಿದೆ.







