ಕಾಶ್ಮೀರದ ಪರಿಸ್ಥಿತಿ ತೀವ್ರ ಕಳವಳಕಾರಿ: ಅಮೆರಿಕ ಸೆನೆಟ್ ಸದಸ್ಯ ಸ್ಯಾಂಡರ್ಸ್
“ಸಂವಹನದ ಮೇಲಿನ ತಡೆಯನ್ನು ತಕ್ಷಣ ತೆರವು ಮಾಡಬೇಕು”
ವಾಷಿಂಗ್ಟನ್, ಸೆ.1: ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸುವ ವಿಶ್ವಸಂಸ್ಥೆಯ ಪ್ರಯತ್ನಕ್ಕೆ ಅಮೆರಿಕ ಬೆಂಬಲ ನೀಡಬೇಕು ಎಂದು ಅಮೆರಿಕದ ಸೆನೆಟ್ ಸದಸ್ಯ ಮತ್ತು ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬೆರ್ನಿ ಸ್ಯಾಂಡರ್ಸ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ತಮಗೆ ತೀವ್ರ ಕಳವಳ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಆಗಸ್ಟ್ 5ರ ಬಳಿಕ ಕಣಿವೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
"ಸಂವಹನಕ್ಕೆ ಒಡ್ಡಿರುವ ತಡೆಯನ್ನು ತಕ್ಷಣ ತೆರವು ಮಾಡಬೇಕು" ಎಂದು ಸಮಾರಂಭವೊಂದರಲ್ಲಿ ಮಾತನಾಡಿದ 77 ವರ್ಷದ ಸೆಂಡರ್ಸ್ ಅಗ್ರಹಿಸಿದರು.
"ಸಂಪರ್ಕ ತಡೆಯನ್ನು ತಕ್ಷಣ ತೆರವುಗೊಳಿಸಬೇಕು ಹಾಗು ಅಮೆರಿಕ ಸರ್ಕಾರ ದಿಟ್ಟವಾಗಿ, ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬೆಂಬಲ ನೀಡಬೇಕು. ಕಾಶ್ಮೀರ ಜನರ ಇಚ್ಛೆಯನ್ನು ಬೆಂಬಲಿಸುವ ಸಂಬಂಧ ವಿಶ್ವಸಂಸ್ಥೆ ಕೈಗೊಂಡಿರುವ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು” ಒತ್ತಾಯಿಸಿದರು.
ಈ ವಾರದ ಆರಂಭದಲ್ಲಷ್ಟೇ ಜಿ-7 ಶೃಂಗದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಕಾಶ್ಮೀರ ವಿವಾದದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚರ್ಚಿಸಿದ್ದರು.