ಸಮಸ್ಯೆ ಮುಕ್ತ ಯಲಹಂಕ ನಿರ್ಮಾಣಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ: ಎಸ್.ಆರ್.ವಿಶ್ವನಾಥ್
ಬೆಂಗಳೂರು, ಸೆ.1: ಸಮಸ್ಯೆ ಮುಕ್ತ ಯಲಹಂಕ ನಿರ್ಮಾಣ ಹಾಗೂ ಯಲಹಂಕ ತಾಲೂಕು ಆಡಳಿತವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಈ ಕೂಡಲೆ ಕಾರ್ಯ ಪ್ರವೃತ್ತರಾಗಬೇಕೆಂದು ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸೂಚನೆ ನೀಡಿದರು.
ಯಲಹಂಕದ ಮಿನಿವಿಧಾನಸೌಧದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಧಿಕಾರಿಗಳ ಕಾರ್ಯವೈಖರಿ ಚುರುಕಾಗಿದ್ದರೆ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸಲು ಸಾಧ್ಯ. ನಾಗರಿಕರು ತಮ್ಮ ಕಚೇರಿಗಳಿಗೆ ಬಂದಾಗ ಸೌಜನ್ಯಯುತವಾಗಿ ನಡೆದುಕೊಳ್ಳುವ ಜೊತೆಗೆ, ನಿಗಧಿತ ಅವಧಿಯೊಳಗೆ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.
ಕೆಲಸದಲ್ಲಿ ಶ್ರದ್ಧೆಯಿಲ್ಲದೆ ಬೇಜವಾಬ್ದಾರಿಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಮುಲಾಜಿಲ್ಲದೆ ಗೇಟ್ಪಾಸ್ ನೀಡಲಾಗುವುದು. ಕ್ಷೇತ್ರದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮುಂತಾದ ಪಿಂಚಣಿ ಯೋಜನೆಯ ಅನುಷ್ಠಾನದಲ್ಲಿ ಕಾರ್ಯಪ್ರಗತಿ ಮಂದಗತಿಯಲ್ಲಿದ್ದು, ಇದು ಚುರುಕುಗೊಳ್ಳುವ ಮೂಲಕ ಫಲಾನುಭವಿಗಳಿಗೆ ವೇತನ ಶೀಘ್ರದಲ್ಲಿ ದೊರೆಯುವಂತಾಗಬೇಕು ಎಂದು ಅವರು ತಾಕೀತು ಮಾಡಿದರು.
94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿರುವ ಬಡವರಿಗೆ ಹಕ್ಕು ಪತ್ರ, ಗ್ರಾ.ಪಂ.ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ 20 ಗುಂಟೆ ಅಥವಾ 1 ಎಕರೆ ಸರಕಾರಿ ಭೂಮಿಯನ್ನು ಸ್ಮಶಾನದ ಉದ್ದೇಶಕ್ಕೆ ಮೀಸಲಿಡಬೇಕು. ಕಸವನ್ನು ವಿಲೇವಾರಿ ಮಾಡಲು ಜಾಗ ನಿಗದಿ, ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾದ ಸುಸಜ್ಜಿತ ಹಾಸ್ಟೆಲ್, ಸುಸಜ್ಜಿತವಾದ ಕ್ರೀಡಾ ಸಂಕೀರ್ಣ ನಿರ್ಮಿಸಲು ಆಯಾ ಇಲಾಖೆಯಿಂದ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಯಲಹಂಕದ ನಾಲ್ಕೂ ಬಿಬಿಎಂಪಿ ವಾರ್ಡ್‌ಗಳು ಮತ್ತು ಗ್ರಾಮ ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಸಮಸ್ಯೆಯ ಶೀಘ್ರ ಪರಿಹಾರಕ್ಕಾಗಿ ಕಾರ್ಯಕ್ರಮ ರೂಪಿಸಲಿದ್ದು, ಪ್ರಥಮವಾಗಿ ಅಟ್ಟೂರು ವಾರ್ಡ್ ವ್ಯಾಪ್ತಿಯಲ್ಲಿ ಮುಂದಿನವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಯಲಹಂಕ ತಾಲೂಕು ತಹಶೀಲ್ದಾರ್ ರಘುಮೂರ್ತಿ, ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಕಿಶೋರ್ ಕುಮಾರ್, ಉಪ ತಹಶೀಲ್ದಾರ್, ಗಂಗಾಧರ್, ಸಿಡಿಪಿಓ ಡಾ.ಸಿದ್ಧರಾಮಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







