ವ್ಯಾಕರಣದ ಮೇಸ್ಟ್ರಿಗೆ ವಿವೇಚನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಸೆ. 1: ‘ವಿಧಾನಸಭೆಯಲ್ಲಿ ಶಾಸಕರಿಗೆ ಅವಕಾಶ ಸಿಕ್ಕಾಗಲೆಲ್ಲಾ ಸಂಧಿ, ಸಮಾಸ ಹೇಳಿಕೊಡುವ ಮೇಸ್ಟ್ರಿಗೆ ಯಾವ ಗಾದೆಯನ್ನು, ಯಾವ ಸಂದರ್ಭದಲ್ಲಿ, ಯಾರನ್ನುದ್ದೇಶಿಸಿ ಹೇಳಬೇಕೆಂಬ ವಿವೇಚನೆ ಇಲ್ಲದಿರುವುದು ವಿಪರ್ಯಾಸ !’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಇತ್ತೀಚೆಗೆ ಮೈಸೂರಿನ ಪಿರಿಯಪಟ್ಟಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಡುಭಾಷೆಯ ಗಾದೆ ಮಾತಿನ್ನು ಉಲ್ಲೇಖಿಸಿ ಅವಹೇಳನಕಾರಿಯಾಗಿ ಟೀಕಿಸಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಸ್ವತಃ ಸಿದ್ದರಾಮಯ್ಯರೆ ಸ್ಪಷ್ಟನೆ ನೀಡಿದ್ದು, ನಾನು ಜೆಡಿಎಸ್ ಮತ್ತು ಬಿಜೆಪಿ ಬಗ್ಗೆ ಟೀಕಿಸಿಲ್ಲ. ಆಡುಭಾಷೆಯಲ್ಲಿ ಹೇಳುವ ಗಾದೆ ಮಾತುನ್ನು ಹೇಳಿದ್ದೆ ಎಂದು ತಿಳಿಸಿದ್ದರು.
ಧನ್ಯವಾದ:‘ಬೆಂಗಳೂರಿನ ಡಿಎಂಕೆ ಪಕ್ಷದ ಪ್ರಮುಖರು ಇಂದು ತಮ್ಮ ಕಾರ್ಯಾಲಯದಲ್ಲಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಜನತೆಗಾಗಿ ಸಂಗ್ರಹಿಸಿರುವ ಸಾಮಗ್ರಿಗಳನ್ನು (ಅಕ್ಕಿ, ಬೇಳೆ, ಸೀರೆ, ಇತರೆ ಬಟ್ಟೆಗಳು) ನನಗೆ ಹಸ್ತಾಂತರಿಸಿದರು. ನನ್ನ ಆ ಎಲ್ಲ ಗೆಳೆಯರಿಗೆ ಧನ್ಯವಾದ ಗಳು. ಅದೇ ಸಮಯದಲ್ಲಿ ಶಿಕ್ಷಣ ಇಲಾಖೆ ಕುರಿತಂತೆ ಕೆಲವಿಚಾರಗಳ ಕುರಿತು ಅವರು ಚರ್ಚಿಸಿದರು’ ಎಂದು ಸಚಿವ ಸುರೇಶ್ ಕುಮಾರ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.







