ಎಸೆಸೆಲ್ಸಿ-ಪಿಯುಸಿ ಮಂಡಳಿ ವಿಲೀನಕ್ಕೆ ಚಾಲನೆ
ಬೆಂಗಳೂರು, ಸೆ.1: ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸಿ ಸಾಮಾನ್ಯ ಪರೀಕ್ಷಾ ಮಂಡಳಿ ರಚಿಸುವ ಹಲವು ವರ್ಷಗಳ ಯೋಜನೆಗೆ ಈ ವರ್ಷ ಚಾಲನೆ ಸಿಗುವ ಸಾಧ್ಯತೆಯಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸೆಸೆಲ್ಸಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯುಸಿ ಪರೀಕ್ಷೆಗಳನ್ನು ನಡೆಸುತ್ತವೆ. ಎರಡೂ ಇಲಾಖೆಗಳ ಕೆಲಸ ಒಂದೇ ಆಗಿರುವುದರಿಂದ ಎರಡನ್ನೂ ವಿಲೀನಗೊಳಿಸಿ ಸಾಮಾನ್ಯ ಪರೀಕ್ಷಾ ಮಂಡಳಿ ಸ್ಥಾಪಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಡಳಿಗಳ ವಿಲೀನ ಪ್ರಕ್ರಿಯೆ ಪ್ರತಿ ವರ್ಷ ಪ್ರಸ್ತಾವ ಬಂದಾಗಲೂ ಕೊನೆ ಕ್ಷಣದಲ್ಲಿ ಮೂಲೆಗುಂಪು ಸೇರುತ್ತಿತ್ತು. ಆದರೆ, ಈ ಬಾರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ಮುಕ್ತಾಯ ಹಂತಕ್ಕೆ ಬರಲಿದೆ ಎಂದು ಸಚಿವರು ಹೇಳಿದ್ದು, 2020 ರ ಪರೀಕ್ಷೆಯನ್ನು ಸಾಮಾನ್ಯ ಪರೀಕ್ಷಾ ಮಂಡಳಿಯೇ ಆಯೋಜಿಸುವ ಸಾಧ್ಯತೆ ಹೆಚ್ಚಿದೆ.ಪ್ರತಿ ವರ್ಷ 8 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಹಾಗೂ 6 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯುತ್ತಾರೆ. ಈ ಪರೀಕ್ಷೆ ನಡೆಸಲು ಎರಡು ಇಲಾಖೆಗಳಿಂದ ಅಂದಾಜು 70 ಲಕ್ಷ ರೂ.ಗಳಷ್ಟು ವೆಚ್ಚವಾಗಲಿದೆ.ವಿಲೀನ ಮಾಡಿ ಪರೀಕ್ಷೆ ನಡೆಸಿದಾಗ ತಗಲುವ ವೆಚ್ಚ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರ ಮಾಡಲಾಗಿದೆ. ಇದಕ್ಕಾಗಿ 2018 ರ ಬಜೆಟ್‌ನಲ್ಲಿ 50 ಕೋಟಿರೂ.ಗಳು ಮೀಸಲಿಟ್ಟಿತ್ತು. ಆದರೆ, ಮೈತ್ರಿ ಸರಕಾರದ ಅವಧಿಯಲ್ಲಿ ಬಹುತೇಕ ಸಚಿವರು ಬದಲಾದ್ದರಿಂದ ಯಾರೂ ವಿಲೀನ ವಿಚಾರಕ್ಕೆ ಮುಂದಾಗಲಿಲ್ಲ.ಸಿಬ್ಬಂದಿ ವಿಲೀನ: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯು ಶಿಕ್ಷಣ ಇಲಾಖೆಯಲ್ಲಿ 300 ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಈ ಎಲ್ಲ ಸಿಬ್ಬಂದಿಯನ್ನೂ ವಿಲೀನ ಮಾಡಬೇಕಾಗುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಎರಡೂ ಕಚೇರಿಗಳಿದ್ದರೂ ಬೇರೆ ಬೇರೆ ಕಡೆಯಲ್ಲಿವೆ. ವಿಲೀನದ ಬಳಿಕ ಕಟ್ಟಡ ಬಳಕೆ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಉಪನ್ಯಾಸಕರ ಸಂಘ ವಿರೋಧ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಲೀನಕ್ಕೆ ಮುಂದಾಗಿರುವುದನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ದೇಶದಲ್ಲಿ ತನ್ನದೇ ಆದ ಮಹತ್ವವಿದೆ. ವೃತ್ತಿಪರ ಶಿಕ್ಷಣ ನೀಡುವುದರಲ್ಲಿಯೂ ಮಾದರಿಯಾಗಿದೆ. ಈ ವೇಳೆ ಶಿಕ್ಷಣ ಮಂಡಳಿ ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಕುರಿತು ಸರಕಾರ ಚಿಂತಿಸಬೇಕು. ವಿಲೀನಕ್ಕೆ ಮುಂದಾಗಬಾರದು ಎಂದು ಸಂಘ ಹೇಳಿದೆ.







